ಏಕತೆ ಮತ್ತು ಒಗ್ಗಟ್ಟು ತೋರಿಸುವ ಸಮಯ, ವಂಶ ಬೆಳೆಸುವ ಯೋಚನೆಗೆ ಸ್ವಲ್ಪ ಕಾಯಬೇಕು: ಜೆ ಪಿ ನಡ್ಡಾ 

ಭಾರತ-ಚೀನಾ ಗಡಿಯ ಲಡಾಕ್ ನಲ್ಲಿ ಸೇನಾ ಸಂಘರ್ಷದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಮಾತಿನ ಛಾಟಿ ಮುಂದುವರಿದಿದ್ದು ಅದು ಬುಧವಾರ ಸಹ ಮುಂದುವರಿದಿದೆ. 
ಜೆ ಪಿ ನಡ್ಡಾ
ಜೆ ಪಿ ನಡ್ಡಾ

ನವದೆಹಲಿ:ಭಾರತ-ಚೀನಾ ಗಡಿಯ ಲಡಾಕ್ ನಲ್ಲಿ ಸೇನಾ ಸಂಘರ್ಷದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಮಾತಿನ ಛಾಟಿ ಮುಂದುವರಿದಿದ್ದು ಅದು ಬುಧವಾರ ಸಹ ಮುಂದುವರಿದಿದೆ. 

ಟ್ವೀಟ್ ನಲ್ಲಿ ಅವರು ಯಾರ ಹೆಸರನ್ನೂ ಸ್ಪಷ್ಟವಾಗಿ ನಮೂದಿಸದೆ ಒಂದು ರಾಜ ಮನೆತನ ಸರ್ಕಾರಕ್ಕೆ ಪ್ರಶ್ನೆ ಕೇಳುತ್ತಲೇ ಇರುತ್ತದೆ, ಅದರ ಅನುಯಾಯಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲೇ ಇರುತ್ತಾರೆ, ಅವರ ಕೆಲಸವೇ ಅದು ಎಂದು ಆರೋಪಿಸಿದ್ದಾರೆ. 

ವಿರೋಧ ಪಕ್ಷವೆಂದರೆ ನಾವೊಬ್ಬರೆ ಎಂಬ ಭ್ರಮೆ ಈ ದೇಶದಲ್ಲಿ ಒಂದು ರಾಜಮನೆತನದ ಪಕ್ಷಕ್ಕೆ ಮತ್ತು ಅದರ ಅನುಯಾಯಿಗಳಿಗಿದೆ. ಆ ರಾಜ ಮನೆತನ ಆಗಾಗ ತಂತ್ರಗಳನ್ನು ಎಸೆಯುತ್ತಿರುತ್ತದೆ, ಅದರ ಅನುಯಾಯಿಗಳು ನಕಲಿ ಸುದ್ದಿಗಳನ್ನು ಹಬ್ಬಿಸುತ್ತಿರುತ್ತಾರೆ. ಲಡಾಕ್ ಬಿಕ್ಕಟ್ಟು ಇತ್ತೀಚಿನ ಅಂತಹ ನಕಲಿ ಸುದ್ದಿಗಳಲ್ಲೊಂದು ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

ಸರ್ಕಾರವನ್ನು ಪ್ರಶ್ನೆ ಮಾಡುವುದು ವಿರೋಧ ಪಕ್ಷಗಳ ಹಕ್ಕು. ಕಳೆದ ಸರ್ವಪಕ್ಷ ಸಭೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆದಿದ್ದವು. ಹಲವು ವಿರೋಧ ಪಕ್ಷಗಳ ನಾಯಕರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದರು. ಸರ್ಕಾರದ ನಿರ್ಧಾರವನ್ನು ಕೂಡ ಬೆಂಬಲಿಸಿದರು. ಆದರೆ ಒಂದು ಕುಟುಂಬ ಮಾತ್ರ ಅದಕ್ಕೆ ತದ್ವಿರುದ್ಧ, ಅಪವಾದ, ಆ ಕುಟುಂಬ ಯಾವುದು ಎಂದು ನಿಮಗೆ ಊಹಿಸಬಹುದೇ ಎಂದು ನಡ್ಡಾ ಕೇಳಿದ್ದಾರೆ.

ತಿರಸ್ಕರಿಸಲ್ಪಟ್ಟ ಮತ್ತು ಹೊರಹಾಕಲ್ಪಟ್ಟ ರಾಜವಂಶವು ಎಲ್ಲಾ ವಿರೋಧ ಪಕ್ಷಗಳಿಗೆ ಸಮನಾಗಿಲ್ಲ, ಅದರ ಹಿತಾಸಕ್ತಿ ದೇಶದ ಹಿತಾಸಕ್ತಿಯಲ್ಲ. ಇಂದು ಇಡೀ ದೇಶ ಒಂದಾಗಿದ್ದು, ನಮ್ಮ ಸೇನಾಪಡೆಯನ್ನು ಬೆಂಬಲಿಸುತ್ತಿದೆ. ಇದು ಒಗ್ಗಟ್ಟು ಮತ್ತು ಐಕ್ಯತೆ ತೋರಿಸುವ ಸಮಯ ಎಂದು ನಡ್ಡಾ ಹೇಳಿದ್ದಾರೆ.

ಈ ದೇಶದ ಒಂದು ಮನೆತನದವರಿಂದಾಗಿ ನಾವು ಸಾವಿರಾರು ಚದರಡಿ ಜಾಗವನ್ನು ಬಿಟ್ಟುಕೊಟ್ಟಿದ್ದೇವೆ. ಸಿಯಾಚಿನ್ ಹಿಮನದಿ ಬಹುತೇಕ ಭಾಗ ಕಳೆದುಕೊಂಡಿದ್ದೇವೆ. ಭಾರತ ದೇಶದ ಜನರು ಈ ಮನೆತನವನ್ನು ತಿರಸ್ಕರಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com