
ನವದೆಹಲಿ: ಭಾರತ ಮತ್ತು ಭೂತಾನ್ ನಡುವಣ ಸಂಬಂಧ ನಿಜಕ್ಕೂ ವಿಶಿಷ್ಠವಾಗಿದೆ ಎಂದು ಬಣ್ಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಕೊರೋನಾವೈರಸ್ ವಿರುದ್ಧ ಎರಡು ರಾಷ್ಟ್ರಗಳು ಒಟ್ಟಾಗಿ ಹೋರಾಡಲಿವೆ. ಜಾಗತಿಕ ಬಿಕ್ಕಟ್ಟನ್ನು ಮೆಟ್ಟಿ ನಿಲ್ಲುವಲ್ಲಿ ಭಾರತ ಭೂತಾನ್ ರಾಷ್ಟ್ರ ಪರ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.
ಭೂತಾನ್ ನಲ್ಲಿ 600 ಮೆಗಾ ವ್ಯಾಟ್ ಸಾಮರ್ಥ್ಯದ ಕೊಲಾಂಗ್ ಚು ಜೆವಿ ಜಲವಿದ್ಯುತ್ ಯೋಜನೆಗೆ ಭೂತಾನ್ ಹಾಗೂ ಕೊಲಾಂಗ್ ಚು ಹೈಡ್ರೊ ಎನರ್ಜಿ ಲಿಮೆಟಿಡ್ ಸಹಿ ಹಾಕಿದ ಬೆನ್ನಲ್ಲೇ ಜೈಶಂಕರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಜಂಟಿ ಪಾಲುದಾರಿಯ ಯೋಜನೆಯಿಂದ ನೆರೆಯ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧದಲ್ಲಿ ಮತ್ತಷ್ಟು ವೃದ್ಧಿಯಾಗಲಿದೆ.600 ಮೆಗಾ ವ್ಯಾಟ್ ಸಾಮರ್ಥ್ಯದ ಕೊಲಾಂಗ್ ಚು ಜೆವಿ ಜಲವಿದ್ಯುತ್ ಯೋಜನೆಯನ್ನು ಮೊದಲ ಬಾರಿಗೆ ಉಭಯ ದೇಶಗಳ ಸಹಭಾಗಿತ್ವದಲ್ಲಿ ಭೂತಾನ್ ನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಸಾಧನೆಗೆ ಭೂತಾನ್ ನ ಡ್ರಂಕ್ ಗ್ರೀನ್ ಪವರ್ ಕಾರ್ಪೋರೇಷನ್ ಮತ್ತು ಭಾರತದ ಸಟ್ಲಜ್ ಜಲ ವಿದ್ಯುತ್ ನಿಗಮ ಲಿಮೆಟೆಡ್ ನ್ನು ಅಭಿನಂದಿಸುತ್ತೇನೆ.ಆದಷ್ಟು ಬೇಗ ಯೋಜನೆಯನ್ನು ಪೂರ್ಣಗೊಳಿಸುವ ವಿಶ್ವಾಸ ಹೊಂದಿರುವುದಾಗಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಜೈಶಂಕರ್ ತಿಳಿಸಿದರು.
ಈ ಯೋಜನೆ ಆರಂಭದಿಂದ ಭೂತಾನ್ ನಲ್ಲಿ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ಹಾಗೂ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.ಭೂತಾನ್ ಗೆ ಮೆಡಿಕಲ್ ಕಿಟ್ ಗಳನ್ನು ಭಾರತ ಪೂರೈಸಲಿದೆ.ಲಾಕ್ ಡೌನ್ ಇದ್ದರೂ ಭೂತಾನ್ ಗೆ ಯಾವುದೇ ಅಡೆತಡೆಯಾಗದಂತೆ ಅಗತ್ಯವಸ್ತುಗಳನ್ನು ಪೂರೈಸಿದ್ದೇವೆ.ಆರೋಗ್ಯ, ಆರ್ಥಿಕ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಭೂತಾನ್ ಜೊತೆಗೆ ಭಾರತ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಭೌಗೋಳಿಕ, ಚಾರಿತ್ರಿಕ, ಸಂಸ್ಕೃತಿ, ಆದ್ಯಾತ್ಮಿಕ ಸಂಪ್ರದಾಯದಲ್ಲಿ ಉಭಯ ದೇಶಗಳ ನಡುವಣ ವಿಶಿಷ್ಠ ಸಂಬಂಧವಿದೆ. ಈ ವಿಶೇಷ ಒಪ್ಪಂದದಿಂದ ಎರಡು ರಾಷ್ಟ್ರಗಳಿಗೆ ಮಾತ್ರ ಪ್ರಯೋಜನವಲ್ಲ,ವಿಶ್ವಕ್ಕೆ ಒಂದು ಉದಾಹರಣೆಯಾಗಲಿದೆ ಎಂದು ಜೈ ಶಂಕರ್ ತಿಳಿಸಿದರು.
Advertisement