ಲಖನೌ: ದೇಶದಲ್ಲಿ ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) 2021’ ಕೆಲಸ ಕಾರ್ಯಗಳನ್ನು ಮುಂದೂಡಿದೆ.
2021ರ ಮೊದಲ ಹಂತದ ಜನಗಣತಿ ಮತ್ತು ಎನ್‌ಪಿಆರ್ ಅನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ ಎಂದು ಉತ್ತರ ಪ್ರದೇಶ ಗೃಹ ಸಚಿವಾಲಯ ತಿಳಿಸಿದೆ. ಈ ಹಿಂದೆಯೂ ಕೂಡ ಕೋವಿಡ್–19 ಹಿನ್ನೆಲೆಯಲ್ಲಿ ಎನ್‌ಪಿಆರ್ ಪರಿಷ್ಕರಣೆಯನ್ನು ಮಾರ್ಚ್ 25ರಂದೇ ಕೇಂದ್ರ ಸರ್ಕಾರ ಮುಂದೂಡಿತ್ತು. ಇದೇ ಸಂದರ್ಭದಲ್ಲೇ ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‌ಪಿಆರ್‌ನಂತಹ ಯೋಜನೆಗಳನ್ನು ಸರ್ಕಾರ ಮುಂದೂಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು.
ಇನ್ನು ಬಿಜೆಪಿಯೇತರ ಸರ್ಕಾರವಿರುವು ರಾಜ್ಯಗಳೂ ಕೂಡ ಕೇಂದ್ರದ ಎನ್ ಪಿಆರ್ ಗೆ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ ಎನ್ ಪಿಆರ್ ವಿರುದ್ಧ ನಿರ್ಣಯ ತಂದು ತಡೆಯೊಡ್ಡಿದ್ದವು. ಪ್ರಮುಖವಾಗಿ ಆಂಧ್ರ ಪ್ರದೇಶ, ದೆಹಲಿ, ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದವು. ಬಳಿಕ ರಾಜಸ್ಥಾನ, ಪಂಜಾಬ್, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ಛತ್ತೀಸ್ ಘಡ ಸರ್ಕಾರಗಳು ಎನ್ ಪಿಆರ್ ವಿರುದ್ಧ ನಿರ್ಣಯ ಮಂಡಿಸಿದ್ದವು.
ಇನ್ನು ಕೇಂದ್ರ ಸರ್ಕಾರ ಸಿಎಎ ಬೆನ್ನಲ್ಲೇ ಎನ್ ಪಿಆರ್ ಘೋಷಣೆ ಮಾಡಿ ಇದಕ್ಕಾಗಿ 3941 ಹಣ ಮೀಸಲಿಟ್ಟಿತ್ತು.
Advertisement