ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ ಪೂರ್ವ ಜಾಮೀನು ಅರ್ಜಿ ವಿಚಾರಣೆ ನ.23ಕ್ಕೆ ಮುಂದೂಡಿಕೆ
ಮುಂಬೈ: ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಬಂಧನ ಪೂರ್ವ ಜಾಮೀನು ಅರ್ಜಿ (ನಿರೀಕ್ಷಣಾ ಜಾಮೀನು) ವಿಚಾರಣೆಯನ್ನು ಕೋರ್ಟ್ ನವೆಂಬರ್ 23ಕ್ಕೆ ಮುಂದೂಡಿಕೆ ಮಾಡಿದೆ.
ರಿಪಬ್ಲಿಕ್ ಟಿವಿ ಸಂಪಾದಕ ಮತ್ತು ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಅವರ ಪತ್ನಿ ವಿರುದ್ಧ ದಾಖಲಾಗಿರುವ ಮಹಿಳಾ ಪೊಲೀಸ್ ಅಧಿಕಾರಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ನಿರೀಕ್ಷಣಾ ಅರ್ಜಿ ವಿಚಾರಣೆಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ನವೆಂಬರ್ 23ಕ್ಕೆ ಮುಂದೂಡಿಕೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರ ಪರ ವಕೀಲ ಶ್ಯಾಮ್ ಕಲ್ಯಾಂಕರ್ ಅವರು ನ್ಯಾಯಾಧೀಶರ ಅಲಭ್ಯತೆಯಿಂದಾಗಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 23ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಅಂತೆಯೇ ಸುಪ್ರೀಂ ಕೋರ್ಟ್‌ನ ವಿವರವಾದ ಆದೇಶಕ್ಕಾಗಿ ನಾವು ಕಾಯುತ್ತಿರುವುದರಿಂದ ನಾವು ಇಂದು ಆದೇಶ ಪಡೆದಿಲ್ಲ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಅರ್ನಬ್ ಗೋಸ್ವಾಮಿ ಅವರಿಗೆ 2018ರ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಕಳೆದ ನವೆಂಬರ್ 4ರಂದು ಕೇಂದ್ರ ಮುಂಬೈನ ಎನ್ ಎಂ ಜೋಷಿ ಮಾರ್ಗ್ ನಲ್ಲಿರುವ ನಿವಾಸಕ್ಕೆ ಆಗಮಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅರ್ನಬ್ ಮತ್ತು ಅವರ ಪತ್ನಿ ಸಂಬ್ರಾತಾ ರೇ ಗೋಸ್ವಾಮಿ ಹಲ್ಲೆ ಮಾಡಿದರು ಎಂಬ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 353 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯ ನಿರ್ವಹಿಸದಂತೆ ತಡೆಯುವ ಹಲ್ಲೆ), 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಕುಟುಂಬ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ