ಮುಂದಿನ ಚಳಿಗಾಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಅನುಮಾನ?

ವಿಧಾನಮಂಡಲದ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮಸೂದೆ ಮಂಡನೆ ಮಾಡುವುದು ಅನುಮಾನ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಧಾನಮಂಡಲದ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮಸೂದೆ ಮಂಡನೆ ಮಾಡುವುದು ಅನುಮಾನ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ. 

ಪ್ರಸ್ತುತ ರಾಜ್ಯ ಸರ್ಕಾರವು ಜಾತಿ ಆಧಾರಿತ ಮಂಡಳಿಗಳು, ನಿಗಮಗಳನ್ನು ರಚನೆ ಮಾಡುವುದು, ಸಮುದಾಯಗಳಿಗೆ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸುವ ಒತ್ತಡದಲ್ಲಿದ್ದು, ಇಂತಹ ಸಂದರ್ಭದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ಮನಸ್ಸು ಮಾಡುತ್ತಿಲ್ಲ ಎಂದು ತಿಳಿದುಬಂದಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಯಾವುದೇ ಆತುರವಿಲ್ಲ. ಡಿಸೆಂಬರ್ ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ. 

2008 ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಗೋಹತ್ಯೆ ನಿಷೇಧ ಕಾಯ್ದೆಗೆ ಸದನದಲ್ಲಿ ಅಂಗೀಕಾರ ನೀಡಲಾಗಿತ್ತು. ಬಳಿಕ ಅಂದಿನ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರಿಗೆ ಕಳುಹಿಸಿಕೊಡಲಾಗಿತ್ತು. ಆದರೆ, ಇದಕ್ಕೆ ಒಪ್ಪಿಗೆ ನೀಡದ ಪ್ರತಿಭಾ ಪಾಟೀಲ್ ಅವರು ವಾಪಸ್ ಕಳುಹಿಸಿ, ಸ್ಪಷ್ಟೀಕರಣ ನೀಡುವಂತೆ ಸೂಚಿಸಿದ್ದರು. ಬಳಿಕ 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಮಸೂದೆಯನ್ನು ಹಿಂಪಡೆಯಲಾಗಿತ್ತು. 

2018 ರ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಮಂಗಳೂರಿನಲ್ಲಿ ನಡೆಸಲಾಗಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿಯೂ ಗೋಹತ್ಯೆ ನಿಷೇಧ ಜಾರಿಗೆ ತರಲು ಶಿಫಾರಸು ಮಾಡಲಾಗಿತ್ತು. 

ಜುಲೈ 2019ರಲ್ಲಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಸರ್ಕಾರವು ಕಾನೂನು ಜಾರಿಗೆ ತರಲು ಉತ್ಸುಕ ತೋರಿತ್ತು. ಬಿಜೆಪಿ ನಾಯಕರು ಮಸೂದೆ ಜಾರಿಗೆ ತರಲು ಆಸಕ್ತಿ ತೋರಿಸುತ್ತಿದ್ದಾರೆ. ಚೌವ್ಹಾಣ್ ಅವರು ಇತ್ತೀಚೆಗೆ ವಿಜಯಪುರಕ್ಕೆ ಭೇಟಿ ನೀಡಿದಾಗ ಮಸೂದೆ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. 

ಅದರೆ, ಗುರುವಾರ ಹೇಳಿಕೆ ನೀಡಿರುವ ಚೌವ್ಹಾಣ್ ಅವರು, ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರುವ ಸಾಧ್ಯತೆಗಳಿಲ್ಲ. ಗುಜರಾತ್ ಹಾಗೂ ಉತ್ತರಪ್ರದೇಶದ ಮಾದರಿಯನ್ನು ಅಧ್ಯಯನ ನಡೆಸಲಾಗುತ್ತಿದೆ. ಕಾಯ್ದೆ ಜಾರಿಗೆ ತರಲು ಕಾಲಾವಕಾಶ ಬೇಕಿದೆ. ಶೀಘ್ರದಲ್ಲೇ ಅಥವಾ ನಂತರ ದಿನಗಳಲ್ಲಿ ಕಾಯ್ದೆ ಜಾರಿಗೆ ತರಲಾಗುತ್ತದೆ. ಕಾನೂನು ಜಾರಿಗೆ ಬಂದ ನಂತರ ಗೋವುಗಳನ್ನು ಇತರ ರಾಜ್ಯಗಳಿಗೆ ಸಾಗಿಸುವುದರ ಜೊತೆಗೆ ಗೋವುಗಳ ಮಾರಾಟ ಮತ್ತು ಹತ್ಯೆಯನ್ನು ನಿಷೇಧಿಸಲಾಗುವುದು ಎಂದು ತಿಳಿಸಿದ್ದಾರೆ. 

ಮರಾಠಾ ಅಭಿವೃದ್ಧಿ ಪ್ರಾಧಿಕಾರದ ಘೋಷಣೆ ಮಾಡಿದ ಬಳಿಕ ಈಗಾಗಲೇ ಸಾಕಷ್ಟು ಸಮಸ್ಯೆಯನ್ನು ಸರ್ಕಾರ ಎದುರಿಸುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದು ಸರಿಯಲ್ಲ ಹೀಗಾಗಿ ಸದನದಲ್ಲಿ ಮಸೂದೆ ಕುರಿತು ಯಾವುದೇ ಪ್ರಸ್ತಾಪಗಳೂ ಆಗುವುದಿಲ್ಲ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com