ದೆಹಲಿ ಆಸ್ಪತ್ರೆಯ 29 ಮಂದಿ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೋನಾ ಸೋಂಕು, ಸ್ಯಾನಿಟೈಸೇಷನ್ ಬಳಿಕ ಸೇವೆಗೆ ಮರಳಿದ ಹಿಂದೂರಾವ್ ಆಸ್ಪತ್ರೆ!

ಮಾರಕ ಕೊರೋನಾ ವೈರಸ್ ಗೆ ದೆಹಲಿ ತತ್ತರಿಸಿ ಹೋಗಿದ್ದು, ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೇ ವೈರಸ್ ಸೋಂಕು ತಗಲುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರಿ ಹಿನ್ನಡೆಯಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ದೆಹಲಿ ತತ್ತರಿಸಿ ಹೋಗಿದ್ದು, ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೇ ವೈರಸ್ ಸೋಂಕು ತಗಲುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರಿ ಹಿನ್ನಡೆಯಾಗುವಂತೆ ಮಾಡಿದೆ.

ಹೌದು.. ಈ ಹಿಂದೆ ಬಾಬು ಜಗಜೀವನ್ ರಾಮ್ ಮೆಮೋರಿಯಲ್ ಆಸ್ಪತ್ರೆಯ 44 ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೋನಾ ವೈರಸ್ ಕಂಡುಬಂದ ಹಿನ್ನಲೆಯಲ್ಲಿ ಇಡೀ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಇದಾದ ಕೇವಲ 24 ಗಂಟೆಗಳ ಅವಧಿಯಲ್ಲೇ ಹಿಂದೂರಾವ್ ಆಸ್ಪತ್ರೆಯ  ನರ್ಸ್ ಒಬ್ಬರಲ್ಲಿ ವೈರಸ್ ಸೋಂಕು ಕಂಡುಬಂದ ಹಿನ್ನಲೆಯಲ್ಲಿ ಈ ಆಸ್ಪತ್ರೆಯನ್ನು ಕೂಡ ಸೀಲ್ ಡೌನ್ ಮಾಡಲಾಗಿತ್ತು.

ಇದೀಗ ಈ ಘಟನೆಯನ್ನೂ ಮೀರಿಸುವಂತೆ ಒಂದೇ ಆಸ್ಪತ್ರೆಯ ವೈದ್ಯರು, ನರ್ಸ್ ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಬರೊಬ್ಬರಿ 29 ಮಂದಿ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ ಬಾಬಾ ಸಾಹೇಬ್ ಅಂಬೇಡ್ಕರ್  ಆಸ್ಪತ್ರೆಯ 29 ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ತಗುಲಿದ್ದು, ಇಲ್ಲರನ್ನೂ ಇದೀಗ ಚಿಕಿತ್ಸೆಗೆ ಒಳಪಡಿಸಲಾಗಿದೆ.

ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹತ್ತಿಸಿದ ಸೋಂಕಿತ ಮಹಿಳೆ
ಇನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಈ ಹಿಂದೆ ಚಿಕಿತ್ಸೆಗೆ ಬಂದಿದ್ದ ಸೋಂಕಿತ ಮಹಿಳೆಯಿಂದಲೇ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಈ ಹಿಂದೆ ಸುಮಾರು 40 ವರ್ಷದ ಮಹಿಳೆ ಚಿಕಿತ್ಸೆಗೆ ಬಂದಿದ್ದರು ಈ ವೇಳೆ ಮಹಿಳೆಯ ಸಂಪರ್ಕಕ್ಕೆ  ಬಂದಿದ್ದ ಸುಮಾರು 57 ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಿ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಇದೀಗ 29 ಮಂದಿಯಲ್ಲಿ ಸೋಂಕು ದೃಢವಾಗಿದೆ.

ಸ್ಯಾನಿಟೈಸೇಷನ್ ಬಳಿಕ ಸೇವೆಗೆ ಮರಳಿದ ಹಿಂದೂರಾವ್ ಆಸ್ಪತ್ರೆ!
ಹಿಂದೂರಾವ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನರ್ಸ್ ಒಬ್ಬರಲ್ಲಿ ಸೋಂಕು ಕಂಡುಬಂದಿದ್ದು, ಅವರು ಆಸ್ಪತ್ರೆ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಡೀ ಆಸ್ಪತ್ರೆಯನ್ನೇ ಸೀಲ್ ಡೌನ್ ಮಾಡಲಾಗಿತ್ತು. ಅಲ್ಲದೆ ಸೋಂಕು ಪ್ರಸರಣ  ತಪ್ಪಿಸಲು ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಿ ಕಂಟೈನ್ ಮೆಂಟ್ ಝೋನ್ ಎಂದು ಘೋಷಣೆ ಆಸ್ಪತ್ರೆಯ ಕಾರ್ಯಗಳನ್ನು ಸ್ಥಗಿತಗೊಳಿಸಿ, ಇಡೀ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಇದೀಗ ಸ್ಯಾನಿಟೈಸೇಷನ್ ಕಾರ್ಯ ಪೂರ್ಣಗೊಂಡಿದ್ದು, ಮತ್ತೆ ಆಸ್ಪತ್ರೆ ಸೇವೆಗೆ ಮರಳಿದೆ.

ಇನ್ನು ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 111 ಹೊಸ ಪಾಸಿಟಿವ್ ಪ್ರಕರಣಗಳ ದಾಖಲಾಗಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 2,625ಕ್ಕೆ ಏರಿಕೆಯಾಗಿದೆ. ಈವರೆಗೂ ದೆಹಲಿಯಲ್ಲಿ 54 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com