ಆಂಧ್ರ ಪ್ರದೇಶದಲ್ಲಿ ನಿಗೂಢ ಕಾಯಿಲೆಗೆ ಒಂದು ಸಾವು, 476 ಮಂದಿ ಅಸ್ವಸ್ಥ

ಈ ಹಿಂದೆ ವಿಷಾನಿಲ ದುರಂತಕ್ಕೆ ಸಾಕ್ಷಿಯಾಗಿದ್ದ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಅಂತಹುದೇ ಘಟನೆ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿ ಬರೊಬ್ಬರಿ 476 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಂಧ್ರ ಪ್ರದೇಶದಲ್ಲಿ ನಿಗೂಢ ಕಾಯಿಲೆಗೆ ಒಂದು ಸಾವು, 476 ಮಂದಿ ಅಸ್ವಸ್ಥ

ವಿಜಯವಾಡ: ಈ ಹಿಂದೆ ವಿಷಾನಿಲ ದುರಂತಕ್ಕೆ ಸಾಕ್ಷಿಯಾಗಿದ್ದ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಅಂತಹುದೇ ಘಟನೆ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿ ಬರೊಬ್ಬರಿ 476 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಶ್ಚಿಮ ಗೋದಾವರಿಯ ಜಿಲ್ಲಾ ಕೇಂದ್ರವಾದ ಎಲೂರಿನಲ್ಲಿ ಈ ಘಟನೆ ನಡೆದಿದ್ದು, ಇಡೀ ಊರಿನ ನಿವಾಸಿಗಳು ದಿಢೀರನೇ ಅಸ್ವಸ್ಥರಾಗಿದ್ದಾರೆ. ನಿವಾಸಿಗಳಲ್ಲಿ ವಾಂತಿ, ತೀವ್ರ ಚಳಿ ಮತ್ತು ತಲೆನೋವು ಕಾಣಿಸಿಕೊಂಡಿದೆ. ಅಸ್ವಸ್ಥರಾದ ಗ್ರಾಮಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಕಳೆದ 24 ಗಂಟೆಗಳಲ್ಲಿ ಇಂತಹ ಬರೊಬ್ಬರಿ 480ಹೆಚ್ಚು ಪ್ರಕರಣಗಳು ಕಂಡುಬಂದಿದೆ. 

ಪ್ರಸ್ತುತ ಅಸ್ವಸ್ಥರ ಪೈಕಿ 332 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು, ಇನ್ನೂ 125ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸ್ವಸ್ಥರ ಪೈಕಿ 222 ಮಂದಿ ಮಹಿಳೆಯರು ಮತ್ತು 67 ಮಂದಿ ಮಕ್ಕಳು, 26 ಮಂದಿ ಯುವತಿಯರು ಸೇರಿದ್ದಾರೆ ಎನ್ನಲಾಗಿದೆ. 

ಇನ್ನು ಘಟನೆಯಲ್ಲಿ ಎಲೂರಿನ ವಿದ್ಯಾನಗರದ ಶ್ರೀಧರ್ ಎಂಬುವವರು ಸಾವನ್ನಪ್ಪಿದ್ದು, ಅವರ ಸಾವಿಗೆ ಕಾರಣವೇನು ಎಂಬುದು ತಿಳಿದಿಲ್ಲ. 

ಮೂಲಗಳ ಪ್ರಕಾರ ಜನರ ಅಸ್ವಸ್ಥತೆಗೆ ಜಿಲ್ಲಾಡಳಿತ ಸರಬರಾಜು ಮಾಡಿದ್ದ ಕಲುಷಿತ ಕುಡಿಯುವ ನೀರು ಕಾರಣ ಎಂದು ಶಂಕಿಸಲಾಗಿದೆಯಾದರೂ, ಈ ಆರೋಪವನ್ನು ನಿರಾಕರಿಸಿರುವ ಜಿಲ್ಲಾಡಳಿತ ನೀರು ಕಲುಷಿತವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ, ಇನ್ನು ಅಸ್ವಸ್ಥರಿಗೆ ಚಿಕಿತ್ಸೆ  ನೀಡುತ್ತಿದ್ದ ಓರ್ವ ನರ್ಸ್ ಕೂಡ ಅಸ್ವಸ್ಥರಾಗಿದ್ದು, ಈ ಅಸ್ವಸ್ಥತೆ ಮಾನವರಿಂದ ಮಾನವರಿಗೆ ತಗಲುತ್ತದೆಯೇ ಎಂಬ ಆತಂಕ ಕೂಡ ವ್ಯಕ್ತವಾಗುತ್ತಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇನ್ನು ಎಲೂರಿಗೆ ಕೇಂದ್ರ ತಂಡ ದೌಡಾಯಿಸಿದ್ದು ಪರಿಸ್ಥಿತಿ ಅವಲೋಕಿಸುತ್ತಿದೆ. ದೆಹಲಿ ಏಮ್ಸ್ ನ ಸಹಾಯಕ ಪ್ರಾಧ್ಯಾಪಕ (ತುರ್ತು ಔಷಧ)ಡಾ.ಜೆಮ್ ಶೆಡ್ ನಾಯರ್ ಅವರು ದೌಡಾಯಿಸಿದ್ದು, ಇವರೊಂದಿಗೆ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವೈರಾಲಜಿಸ್ಟ್  ಅವಿನಾಶ್ ದಿಯೋಷ್ಟಾವರ್ ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಪಿಎಚ್ ಉಪನಿರ್ದೇಶಕ ಸಂಕೇತ್ ಕುಲಕರ್ಣಿ ಅವರು ಇಂದು ಸಂಜೆ ಎಲೂರಿಗೆ ಆಗಮಿಸಲಿದ್ದಾರೆ. 

ವಿಚಾರ ತಿಳಿಯುತ್ತಿದ್ದಂತೆಯೇ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಆಸ್ಪತ್ರೆಗೆ ದೌಡಾಯಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com