ಪಿಡಿಪಿ ಮುಖಂಡನ ಮನೆ ಮೇಲೆ ಉಗ್ರರ ದಾಳಿ, ಓರ್ವ ಪೊಲೀಸ್ ಸಿಬ್ಬಂದಿ ಸಾವು

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರೆದಿದ್ದು, ಪಿಡಿಪಿ ಮುಖಂಡನ ಮನೆ ಮೇಲೆ ದಾಳಿ ನಡೆಸಿದ ಉಗ್ರರು ಓರ್ವ ಪೊಲೀಸ್ ಸಿಬ್ಬಂದಿಯನ್ನು ಹತ್ಯೆಗೈದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರೆದಿದ್ದು, ಪಿಡಿಪಿ ಮುಖಂಡನ ಮನೆ ಮೇಲೆ ದಾಳಿ ನಡೆಸಿದ ಉಗ್ರರು ಓರ್ವ ಪೊಲೀಸ್ ಸಿಬ್ಬಂದಿಯನ್ನು ಹತ್ಯೆಗೈದಿದ್ದಾರೆ.

ಮೂಲಗಳ ಪ್ರಕಾರ ರಾಜಧಾನಿ ಶ್ರೀನಗರದ ನಾಟಿಪೋರಾದ ಪಿಡಿಪಿ ಮುಖಂಡ ಫರ್ವೇಜ್ ಭಟ್ ಅವರ ನಿವಾಸದ ಎದುರು ಭದ್ರತೆಗಾಗಿ ನಿಯೋಜನೆಯಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸ್ ಕಾನ್ ಸ್ಟೇಬಲ್ ಮನ್ಸೂರ್ ಅಹ್ಮದ್ ಎಂಬಾತನಿಗೆ  ಗುಂಡೇಟು ತಗುಲಿದ್ದು, ಕೂಡಲೇ ಅವರನ್ನು ಸಮೀಪದ ಬೋನ್ ಅಂಡ್ ಜಾಯಿಂಟ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಮೃತ ಮನ್ಸೂರ್ ಅಹ್ಮದ್ ಭಟ್ ಅವರ ವೈಯುಕ್ತಿಕ ಭದ್ರತಾ ಸಿಬ್ಬಂದಿಯಾಗಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಪಿಡಿಪಿ ಮುಖಂಡ ಭಟ್, ದಾಳಿಕೋರರು ಸಾಂಪ್ರದಾಯಿಕ ಕಾಶ್ಮೀರಿ ಉಡುಗೆಯಲ್ಲಿ ಬಂದಿದ್ದರು. ಉಡುಪಿನೊಳಗೆ ಎಕೆ 47 ಬಂದೂಕು ಹುದುಗಿಸಿಟ್ಟುಕೊಂಡಿದ್ದರು. ಮನೆಯೊಳಗೆ  ಬರುತ್ತಿದ್ದಂತೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಶಬ್ಧಕೇಳಿ ಜನ ಸೇರುತ್ತಿದ್ದಂತೆಯೇ ಉಗ್ರರು ಓಡಿ ಹೋದರು. ಸಕ್ರಿಯ ರಾಜಕಾರಣಕ್ಕೆ ಸೇರಿದ ಬಳಿಕ ಇದು ನನ್ನ ಮೇಲೆ ನಡೆದ ಮೂರನೇ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಭಟ್, 'ಸರ್ಕಾರವು ನನ್ನ ಭದ್ರತೆಯನ್ನು ಕಡಿತಗೊಳಿಸಿದೆ. ಪಿಎಸ್‌ಒ ಎಚ್ಚರಿಕೆ ನೀಡದಿದ್ದರೆ ನನ್ನ ಕುಟುಂಬದ ಭವಿಷ್ಯ ಏನಾಗಬಹುದಿತ್ತು ಎಂದು ನನಗೆ ತಿಳಿಯುತ್ತಿಲ್ಲ.  ಈ ಹಿಂದೆ ನನಗೆ ಐದು ಪಿಎಸ್ ಓ ಗಳಿದ್ದರು. ಈಗ ಅದನ್ನು 2ಕ್ಕೆ  ಇಳಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಭಟ್ ಈ ಹಿಂದೆ ಹಿಜ್ಬುಲ್ ಉಗ್ರ ಸಂಘಟನೆಯ ಉಗ್ರರಾಗಿದ್ದರು. ಬಳಿಕ ಉಗ್ರ ಸಂಘಟನೆಯಿಂದ ದೂರಾಗಿ ಸಕ್ರಿಯ ರಾಜಕಾರಣಕ್ಕೆ ಧುಮಿಕಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com