ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಮಾರ್ಗಸೂಚಿ ಪರಿಷ್ಕರಣೆ, ಭಕ್ತರು ಪಾಲಿಸಬೇಕಾದ ಕಟ್ಟುನಿಟ್ಟಿನ ಕ್ರಮಗಳು ಇವು!

ಮಹಾಮಾರಿ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಬರಿಮಲೆ ತೀರ್ಥಯಾತ್ರೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
ಶಬರಿಮಲೆ
ಶಬರಿಮಲೆ

ತಿರುವನಂತಪುರಂ: ಮಹಾಮಾರಿ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಬರಿಮಲೆ ತೀರ್ಥಯಾತ್ರೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. 

ಅಯ್ಯಪ್ಪನ ಭಕ್ತರ ಜೊತೆಗೆ, ಶಬರಿಮಲೆ ಕರ್ತವ್ಯದಲ್ಲಿರುವ ಅಧಿಕಾರಿಗಳು ಸಹ ಡಿಸೆಂಬರ್ 26ರಿಂದ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಶಬರಿಮಲೆ ಋತುಮಾನ ಪ್ರಾರಂಭವಾದಾಗಿನಿಂದ 51 ಭಕ್ತರು, 245 ದೇವಸ್ವಂ ಮಂಡಳಿಯ ನೌಕರರು ಮತ್ತು ಇತರ ಮೂವರು ಸೇರಿದಂತೆ ಒಟ್ಟು 299 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಹೇಳಿದ್ದಾರೆ. 
ಅಯ್ಯಪ್ಪನ ಭಕ್ತರು ಸೇರುವ ಪಥನಮತ್ತಟ್ಟ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಶಬರಿಮಲೆ ಯಾತ್ರೆ ವೇಳೆ ಕ್ರಮವಾಗಿ 31% ಮತ್ತು 11% ಪ್ರಕರಣಗಳು ಹೆಚ್ಚಾಗಿದೆ ಎಂದು ಅವರು ಹೇಳಿದರು.

"ಶಬರಿಮಲೆ ತೀರ್ಥಯಾತ್ರೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯ ಕಾರಣ, ಎಲ್ಲರೂ ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಪರಿಷ್ಕೃತ ಮಾರ್ಗಸೂಚಿಗಳು:
* ಯಾತ್ರಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು. ಕಡಿಮೆ ಸಂಖ್ಯೆಯಲ್ಲಿ ತೀರ್ಥಯಾತ್ರೆ ಕೈಗೊಳ್ಳುವ ಮೂಲಕ ಕೊರೋನಾ ವೇಗವಾಗಿ ಹರಡುವುದನ್ನು ತಪ್ಪಿಸಬಹುದು.

*ಯಾತ್ರಿಕರು ಆಗಾಗ್ಗೆ ಕೈ ತೊಳೆಯಬೇಕು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು. ಮಾಸ್ಕ್ ಗಳನ್ನು ಖಡ್ಡಾಯವಾಗಿ ಧರಿಸಬೇಕು. ಪ್ರಯಾಣದ ಸಮಯದಲ್ಲಿಯೂ ಮುನ್ನೆಚ್ಚರಿಕೆ ವಹಿಸಬೇಕು. ತೀರ್ಥಯಾತ್ರೆಯುದ್ದಕ್ಕೂ ಸ್ಯಾನಿಟೈಸರ್ ಅನ್ನು ಜೊತೆಯಲ್ಲಿ ಇಟ್ಟುಕೊಂಡಿರಬೇಕು.  

*ಈ ಹಿಂದೆ ಕೊರೋನಾ ತುತ್ತಾಗಿ ಚೇತರಿಸಿಕೊಂಡಿರುವ ಭಕ್ತರು ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಮತ್ತು ವಾಸನೆ ಕಳೆದುಕೊಳ್ಳುವಂತಹ ಲಕ್ಷಣಗಳು ಇರುವವರು ತೀರ್ಥಯಾತ್ರೆ ಕೈಗೊಳ್ಳಬಾರದು.

* ಡಿಸೆಂಬರ್ 26 ರಿಂದ 'ಮಂಡಲ ಮಾಸಾ ಪೂಜೆ' ನಂತರ ಆಗಮಿಸುವ ಯಾತ್ರಾರ್ಥಿಗಳಿಗೆ ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ.

* ಭಕ್ತರು ಆಗಮನಕ್ಕೆ 24 ಗಂಟೆಗಳ ಮೊದಲು ಪಡೆದ ಕೊರೋನಾ ನೆಗೆಟಿವ್ ಪ್ರಮಾಣಪತ್ರಗಳನ್ನು ಹಾಜರುಪಡಿಸಬೇಕು. ಇದು ಆರ್‌ಎಟಿ-ಪಿಸಿಆರ್, ಆರ್‌ಟಿ-ಲ್ಯಾಂಪ್ ಅಥವಾ ಎಕ್ಸ್‌ಪ್ರೆಸ್ ನ್ಯಾಟ್ ಪರೀಕ್ಷಾ ಫಲಿತಾಂಶವಾಗಿರಬಹುದು.

* ಶಬರಿಮಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾದ ಎಲ್ಲಾ ಅಧಿಕಾರಿಗಳು ಆರ್‌ಟಿ-ಪಿಸಿಆರ್ ಅಥವಾ ಆರ್‌ಟಿ-ಲ್ಯಾಂಪ್ ಅಥವಾ ಎಕ್ಸ್‌ಪ್ರೆಸ್ ನ್ಯಾಟ್ ಪರೀಕ್ಷೆಗೆ ಒಳಗಾಗಬೇಕು.

* ಭಕ್ತರು ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳು ಪ್ರತಿ 30 ನಿಮಿಷಗಳಿಗೊಮ್ಮೆ ಕೈ ತೊಳೆಯಬೇಕು ಅಥವಾ ಸ್ಯಾನಿಟೈಸರ್ ಬಳಸಬೇಕು.

* ಕನಿಷ್ಠ 6 ಅಡಿಗಳ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಮಾಸ್ಕ್ ಅನ್ನು ಸರಿಯಾಗಿ ಧರಿಸಬೇಕು.

* ಕೊರೋನಾದಿಂದ ಚೇತರಿಸಿಕೊಂಡಿರುವ ಅಯ್ಯಪ್ಪನ ಭಕ್ತರು ತೀರ್ಥಯಾತ್ರೆಗೆ ತೆರಳುವ ಮೊದಲು ದೈಹಿಕ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಬೇಕು.

* ಪಂಪಾ ಮತ್ತು ನೀಲಕ್ಕಲ್ನಲ್ಲಿ ಜನಸಂದಣಿಗೆ ಅವಕಾಶವಿಲ್ಲ. ಬಳಕೆಯ ನಂತರ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ಗುಂಪು ಗುಂಪಾಗಿ ಬೆಟ್ಟವನ್ನು ಇಳಿಯಬಾರದು.

* ಯಾತ್ರಾರ್ಥಿಗಳ ಜೊತೆಯಲ್ಲಿ ಚಾಲಕರು, ಕ್ಲೀನರ್‌ಗಳು ಮತ್ತು ಅಡುಗೆಯವರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com