ಬಂಗಾಳದಲ್ಲಿ ಬಿಜೆಪಿ 200 ಸ್ಥಾನ ಗಳಿಸಲು ವಿಫಲವಾದರೆ ನಾಯಕರು ಪಕ್ಷ ತೊರೆಯುತ್ತಾರೆಯೇ: ಪ್ರಶಾಂತ್ ಕಿಶೋರ್ ಸವಾಲು

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನ ಗೆಲ್ಲಲು ವಿಫಲವಾದರೆ ಆ ಪಕ್ಷದ ನಾಯಕರು ಪಕ್ಷ ತೊರೆಯುತ್ತಾರೆಯೇ ಎಂದು ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಪ್ರಶ್ನಿಸಿದ್ದಾರೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ಕೋಲ್ಕತಾ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನ ಗೆಲ್ಲಲು ವಿಫಲವಾದರೆ ಆ ಪಕ್ಷದ ನಾಯಕರು ಪಕ್ಷ ತೊರೆಯುತ್ತಾರೆಯೇ ಎಂದು ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಪ್ರಶ್ನಿಸಿದ್ದಾರೆ.

ಈ ಹಿಂದೆ ಟ್ವೀಟ್ ಮಾಡಿದ್ದ ಪ್ರಶಾಂತ್ ಕಿಶೋರ್, ಬಂಗಾಳದಲ್ಲಿ ಬಿಜೆಪಿ ಪಕ್ಷ ಎರಡಂಕಿಗಿಂತ ಹೆಚ್ಚು ಸ್ಥಾನಗಳಿಸಿದರೆ ತಾವು ಟ್ವಿಟರ್ ತ್ಯಜಿಸುವುದಾಗಿ ಘೋಷಣೆ ಮಾಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ್ದ ಕೆಲ ಬಿಜೆಪಿ ನಾಯಕರು ಬಿಜೆಪಿ ಪಕ್ಷವು 200 ಸ್ಥಾನಗಳನ್ನು ಪಡೆಯಲು  ವಿಫಲವಾದರೆ ತಮ್ಮ ಸ್ಥಾನಗಳನ್ನು ತ್ಯಜಿಸುವುದಾಗಿ ಪ್ರತಿಕ್ರಿಯೆ ನೀಡಿದ್ದರು. ಇದೀಗ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಶಾಂತ್ ಕಿಶೋರ್ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನ ಗೆಲ್ಲಲು ವಿಫಲವಾದರೆ ಆ ಪಕ್ಷದ ನಾಯಕರು ಪಕ್ಷ ತೊರೆಯುತ್ತಾರೆಯೇ ಎಂದು  ಸವಾಲೆಸೆದಿದ್ದಾರೆ.

2014 ರಲ್ಲಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್, ಮೋದಿ ಪ್ರಧಾನ ಮಂತ್ರಿ ಸ್ಥಾನಕ್ಕಾಗಿ ಯಶಸ್ವಿ ಅಭಿಯಾನವನ್ನು ನಿರ್ವಹಿಸಿತ್ತಿದ್ದರು. ಇದೀಗ ಇದೇ ಪ್ರಶಾಂತ್ ಕಿಶೋರ್, ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಪಶ್ಚಿಮ  ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪರ ಕೆಲಸ ಮಾಡುತ್ತಿದ್ದಾರೆ.  

ಇನ್ನು ಪಶ್ಚಿಮ ಬಂಗಾಳ ವಿಧಾನಸಭೆ ರಣಕಣ ಈಗಾಗಲೇ ತಾರಕಕ್ಕೇರಿದ್ದು, ಬಿಜೆಪಿಯ ಹಿರಿಯ ಮುಖಂಡ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳದಲ್ಲಿ ಭರ್ಜರಿ ತಂತ್ರಗಾರಿಕೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ತೃಣಮೂಲ ಕಾಂಗ್ರೆಸ್ ನ ಪ್ರಭಾವಿ ನಾಯಕರಾದ ಸುವೇಂದು  ಅಧಿಕಾರಿ ಸೇರಿದಂತೆ 9 ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದ್ದು, ನಾಯಕರ ಪಕ್ಷ ಸೇರ್ಪಡೆ ವೇಳೆ ಮಾತನಾಡಿದ್ದ ಅಮಿತ್ ಶಾ ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವು 200 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದರು. 

ಇದೇ ವಿಚಾರವಾಗಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರು ಪ್ರಶಾಂತ್ ಕಿಶೋರ್ ಅವರನ್ನು ಕೆಣಕುತ್ತಾ, 'ಪಶ್ಚಿಮ ಬಂಗಾಳ ಚುನಾವಣೆಯ ನಂತರ ದೇಶವು ಮತದಾನ ತಂತ್ರಜ್ಞನನ್ನು ಕಳೆದುಕೊಳ್ಳಲಿದೆ ಎಂದು ಹೇಳಿದ್ದರು.  ಬಂಗಾಳದಲ್ಲಿ ನಡೆಯುತ್ತಿರುವ ಬಿಜೆಪಿ ಸುನಾಮಿಯನ್ನು ಗಮನಿಸಿದರೆ, ಹೊಸ ಸರ್ಕಾರ ರಚನೆಯಾದ ನಂತರ, ದೇಶವು ಚುನಾವಣಾ ತಂತ್ರಜ್ಞನನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು ವಿಜಯವರ್ಗಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಪಶ್ಚಿಮ ಬಂಗಾಳ ವಿಧಾನಸಭೆಗೆ 2021ರ ಏಪ್ರಿಲ್‌-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com