ಅತ್ಯಾಚಾರ ಪ್ರಕರಣ: ಆರೋಪಿ ಮಾಜಿ ಸಚಿವ ಚಿನ್ಮಯಾನಂದಗೆ ಜಾಮೀನು!

ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಜೈಲು ಪಾಲಾಗಿದ್ದ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಜೈಲು ಪಾಲಾಗಿದ್ದ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಅಲಹಾಬಾದ್​ ಹೈಕೋರ್ಟ್​ ಸ್ವಾಮಿ ಚಿನ್ಮಯಾನಂದಗೆ ಷರತ್ತು ಬದ್ಧ ಜಾಮೀನು ನೀಡಿದೆ. ಕಳೆದ ಡಿಸೆಂಬರ್ ನಲ್ಲಿ ಬ್ಲಾಕ್ ಮೇಲ್ ಪ್ರಕರಣದಲ್ಲಿ ಬಂಧಿತಳಾಗಿದ್ದ ಸಂತ್ರಸ್ಥ ವಿದ್ಯಾರ್ಥಿನಿ ಕೂಡ ಬಿಡುಗಡೆಯಾಗಿದ್ದಳು.  ಇದೀಗ ಇದೇ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಸ್ವಾಮಿ ಚಿನ್ಮಯಾನಂದ ಕೂಡ ಜಾಮೀನ ಮೇಲೆ ಬಿಡುಗಡೆಯಾಗಿದ್ದಾರೆ.

ಏನಿದು ಪ್ರಕರಣ
ಸುಲಿಗೆ ಮತ್ತು ಬ್ಲ್ಯಾಕ್​ಮೇಲ್ ಆರೋಪದ ಮೇಲೆ 4 ತಿಂಗಳ ಹಿಂದೆ ಸ್ವಾಮಿ ಚಿನ್ಮಯಾನಂದ ಅವರನ್ನು ಪೊಲೀಸರು ಬಂಧಿಸಿದ್ದರು. ಉತ್ತರ ಪ್ರದೇಶದ ಕಾನೂನು ವಿದ್ಯಾರ್ಥಿನಿ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆ ಬಳಿಕ ಸುಲಿಗೆ ಪ್ರಕರಣದಲ್ಲಿ ಪೊಲೀಸರು ಈಕೆಯನ್ನೇ ಬಂಧಿಸಿದ್ದರು. ಸ್ವಾಮಿ ಚಿನ್ಮಯಾನಂದ ಅವರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಈಕೆ ವಿರುದ್ಧ ಕೇಸ್ ದಾಖಲಿಸಲಾಗಿತ್ತು.

ಉತ್ತರ ಪ್ರದೇಶದ ಶಹಜಾನ್​ಪುರದ ಸಂತ್ರಸ್ತ ಯುವತಿಯು ತನ್ನ ಮೇಲೆ ಸ್ವಾಮಿ ಚಿನ್ಮಯಾನಂದ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮ್ಯಾಜಿಸ್ಟ್ರೇಟ್ ಬಳಿ ಹೇಳಿಕೆ ದಾಖಲಿಸಿದ್ದರು. ಚಿನ್ಮಯಾನಂದ ಅವರನ್ನು ಕೂಡಲೇ ಬಂಧಿಸದಿದ್ದರೆ ಬೆಂಕಿ ಹಚ್ಚಿಕೊಂಡು ಸಾಯುವುದಾಗಿಯೂ ಆ ಯುವತಿ ಬೆದರಿಕೆ ಹಾಕಿದ್ದರು. 73 ವರ್ಷದ ಮಾಜಿ ಸಂಸದ ಸ್ವಾಮಿ ಚಿನ್ಮಯಾನಂದ ಅವರು ಬ್ಲ್ಯಾಕ್ ಮೇಲೆ ಮಾಡಿ 1 ವರ್ಷ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com