#ಸಿಎಎ; ದೆಹಲಿ ಚುನಾವಣೆ ಬಳಿಕ ಶಾಹೀನ್ ಬಾಗ್ ಪ್ರತಿಭಟನೆ ಕುರಿತ ವಿಚಾರಣೆ ಎಂದ ಸುಪ್ರೀಂ ಕೋರ್ಟ್!

ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆ ಕುರಿತ ಅರ್ಜಿ ವಿಚಾರಣೆಯನ್ನು ದೆಹಲಿ ಚುನಾವಣೆ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆ ಕುರಿತ ಅರ್ಜಿ ವಿಚಾರಣೆಯನ್ನು ದೆಹಲಿ ಚುನಾವಣೆ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.

ದೆಹಲಿಯ ಶಾಹಿನ್ ಬಾಗ್ ​ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಲಾಗಿದ್ದ ಅರ್ಜಿ ಕುರಿತು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರು ದೆಹಲಿ ಚುನಾವಣೆ ಬಳಿಕ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ.

ಶಾಹೀನ್ ಬಾಗ್ ಸಮಸ್ಯೆ ಕುರಿತು ನಮಗೂ ಅರಿವಿದ್ದು ಅದರ ನಿವಾರಣೆ ಕೂಡ ಮುಖ್ಯ. ಆದರೆ ಸೋಮವಾರ ಅಂದರೆ ದೆಹಲಿ ಚುನಾವಣೆ ಬಳಿಕ ಈ ಕುರಿತ ವಿಚಾರಣೆ ನಡೆಸಿದರೆ ಸೂಕ್ತ ಎಂದೆನಿಸುತ್ತದೆ ಎಂದು ಪೀಠ ಹೇಳಿದೆ. ಅಂತೆಯೇ ಈ ಪ್ರಕರಣವನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿದರೆ ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಪೀಠ, ಅಗತ್ಯ ಬಿದ್ದರೆ ಹೈಕೋರ್ಟ್ ಗೆ ನಿರ್ದೇಶನ ನೀಡುತ್ತೇವೆ ಎಂದು ಹೇಳಿದೆ. ಅಂತೆಯೇ ಇದೇ ವಿಚಾರವಾಗಿ ದೆಹಲಿ ಹೈಕೋರ್ಟ್ ಕೂಡ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.

ಕಳೆದ ಡಿಸೆಂಬರ್ 15ರಿಂದ ಶಾಹೀನ್ ಬಾಗ್ ಮತ್ತು ಕಲಿಂದಿ ಕುಂಜ್ ಪ್ರದೇಶದಲ್ಲಿ ಸಿಎಎ ವಿರುದ್ಧದ ಪ್ರತಿಭಟನೆ ಹೆಸರಲ್ಲಿ ಪ್ರತಿಭಟನಾಕಾರರು ಸಂಚಾರ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ದೆಹಲಿ ಟ್ರಾಫಿಕ್ ಪೊಲೀಸರಿಗೆ ನಿರ್ದೇಶನ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಸಿಕೊಡಬೇಕು ಎಂದು ವಕೀಲ ಅಮಿತ್ ಸಹ್ನಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅಲ್ಲದೆ ಪ್ರತಿಭಟನೆ ಮೂಲಕ ದೆಹಲಿ ಚುನಾವಣೆಯಲ್ಲಿ ಮತದಾರರ ಗಮನವನ್ನು ಸೆಳೆಯುವ ಪ್ರಯತ್ನ ಕೂಡ ಮಾಡಲಾಗುತ್ತಿದೆ ಎಂದು ಅಮಿತ್ ಸಹ್ನಿ ಆರೋಪಿಸಿದ್ದರು.

ಇದಲ್ಲದೆ ಮಾಜಿ ದೆಹಲಿ ಶಾಸಕ ನಂದ ಕಿಶೋರ್ ಗಾರ್ಗ್ ಅವರು, ತಮ್ಮ ವಕೀಲ ಸುಶಾಂತ್ ಡಿಯೋ ಸುಧಿ ಅವರ ಮುಖಾಂತರ ಶಾಹೀನ್ ಬಾಗ್ ಪ್ರತಿಭಟನಾಕಾರರ ತೆರವುಗೊಳಿಸುವ ಕುರಿತು ನಿರ್ದೇಶನ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com