ಕಣಿವೆ ರಾಜ್ಯದಲ್ಲಿ ತ್ವರಿತಗತಿಯಲ್ಲಿ ನಿರ್ಬಂಧ ತೆರವಿಗೆ ಯುರೋಪಿಯನ್ ಒಕ್ಕೂಟದ ನಿಯೋಗ ಕರೆ
ಜಮ್ಮು- ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ಮರುಕಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿರುವ ಯುರೋಪಿಯನ್ ಒಕ್ಕೂಟದ ನಿಯೋಗ ತ್ವರಿತಗತಿಯಲ್ಲಿ ನಿರ್ಬಂಧ ತೆರವುಗೊಳಿಸಲು ಕರೆ ನೀಡಿದೆ.
Published: 14th February 2020 08:44 PM | Last Updated: 14th February 2020 08:52 PM | A+A A-

ಭದ್ರತಾ ಸಿಬ್ಬಂದಿ
ನವದೆಹಲಿ: ಜಮ್ಮು- ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ಮರುಕಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿರುವ ಯುರೋಪಿಯನ್ ಒಕ್ಕೂಟದ ನಿಯೋಗ ತ್ವರಿತಗತಿಯಲ್ಲಿ ನಿರ್ಬಂಧ ತೆರವುಗೊಳಿಸಲು ಕರೆ ನೀಡಿದೆ.
ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಆರು ತಿಂಗಳ ಬಳಿಕ ಜಮ್ಮು- ಕಾಶ್ಮೀರಕ್ಕೆ 25 ವಿದೇಶಿ ರಾಯಭಾರಿಗಳ ಗುಂಪೊಂದು ಭೇಟಿ ನೀಡಿದ ಮಾರನೇ ದಿನವೇ ಯುರೋಪಿಯನ್ ಒಕ್ಕೂಟ ಈ ರೀತಿಯ ಹೇಳಿಕೆ ನೀಡಿದೆ.
ಪರಿಸ್ಥಿತಿ ಮರುಕಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಕೆಲ ರಾಜಕೀಯ ಮುಖಂಡರ ಬಂಧನ, ಇಂಟರ್ ನೆಟ್, ಮೊಬೈಲ್ ಸೇವೆ ಮತ್ತಿತರ ಸೇವೆಗಳ ಮೇಲಿನ ನಿರ್ಬಂಧ ಹಾಗೆಯೇ ಉಳಿದಿದೆ ಎಂದು ವಿದೇಶಾಂಗ ವ್ಯವಹಾರಗಳು ಮತ್ತು ಭದ್ರತಾ ನೀತಿಯ ಯುರೋಪಿಯನ್ ಒಕ್ಕೂಟದ ವಕ್ತಾರ ವರ್ಜೀನಿ ಬಟ್ಟು- ಹೆನ್ರಿಕ್ಸನ್ ಹೇಳಿದ್ದಾರೆ.
ಗಂಭೀರ ಭದ್ರತಾ ಕಾಳಜಿಗಳನ್ನು ನಾವು ಗುರುತಿಸಿದ್ದು, ಉಳಿದ ನಿರ್ಬಂಧಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವುದು ಬಹುಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು-ಕಾಶ್ಮೀರದ ವಾಸ್ತವ ಪರಿಸ್ಥಿತಿಯನ್ನು ವೀಕ್ಷಿಸಲು ಸದವಕಾಶ ದೊರೆತಿದ್ದು, ಅಲ್ಲಿನ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದ್ದೇವೆ. ಈ ಪ್ರದೇಶದಲ್ಲಿ ಪರಿಸ್ಥಿತಿ ಕುರಿತು ಭಾರತ ದೇಶದೊಂದಿಗೆ ಮಾತುಕತೆ ಮುಂದುವರೆಸಲು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.