ಮಹಾತ್ಮಾಗಾಂಧಿ ಹತ್ಯೆ ಪ್ರಕರಣ ಮರು ವಿಚಾರಣೆ ನಡೆಸಬೇಕು; ಡಾ. ಸುಬ್ರಮಣಿಯನ್ ಸ್ವಾಮಿ

ಮಹಾತ್ಮ ಗಾಂಧಿ ಹತ್ಯೆ ಪ್ರಕರಣವನ್ನು ಮರು ವಿಚಾರಣೆ ನಡೆಸಬೇಕೆಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವಿಟ್ ನಲ್ಲಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹಾತ್ಮ ಗಾಂಧಿ ಹತ್ಯೆ ಪ್ರಕರಣವನ್ನು ಮರು ವಿಚಾರಣೆ ನಡೆಸಬೇಕೆಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವಿಟ್ ನಲ್ಲಿ ಹೇಳಿದ್ದಾರೆ.

ಮಹಾತ್ಮಾ ಗಾಂಧಿಯವರ ಕೊಲೆ ಪ್ರಕರಣವನ್ನು ರಿ ಓಪನ್ ಮಾಡಿ, ಮರು ವಿಚಾರಣೆ ನಡೆಸಬೇಕು ಅವರು ಒತ್ತಾಯಿಸಿದ್ದಾರೆ. ಗಾಂಧೀಜಿಯವರ ಹತ್ಯೆ ಕುರಿತು ಸುಬ್ರಮಣಿಯನ್ ಸ್ವಾಮಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಗಾಂಧಿ ಅವರ ಮೃತ ದೇಹವನ್ನು ಏಕೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಿಲ್ಲ? ಎಂದು ಕೇಳಿದ್ದಾರೆ. ನೇರ ಪ್ರತ್ಯಕ್ಷದರ್ಶಿಗಳಾದ ಅಭ ಹಾಗೂ ಮನು ಅವರನ್ನು ನ್ಯಾಯಾಲಯದಲ್ಲಿ ಏಕೆ ವಿಚಾರಣೆಗೆ ಒಳಪಡಿಸಲಿಲ್ಲ?. ಗೋಡ್ಸೆ ಗುಂಡು ಹಾರಿಸಿದ ರಿವಾಲ್ವರ್ ಪತ್ತೆ ಹಚ್ಚಲು ಏಕೆ ಸಾಧ್ಯವಾಗಲಿಲ್ಲ? ಹಾಗಾಗಿ ಈ ಪ್ರಕರಣವನ್ನು ರಿ ಓಪನ್ ಮಾಡುವುದು ಅವಶ್ಯಕ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಅಸೋಸಿಯೇಟೆಡ್ ಪ್ರೆಸ್ ಇಂಟರ್‌ನ್ಯಾಷನಲ್ ಜರ್ನಲ್ ನ ವರದಿಗಾರನ ಹೇಳಿಕೆ ಉಲ್ಲೇಖಿಸಿ, ಅಂದು ೫.೦೫ ಕ್ಕೆ ೪ ಗುಂಡಿನ ಶಬ್ದಗಳನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಗೂಡ್ಸೆ ಮಾತ್ರ ತಾನು ಎರಡು ಬಾರಿ ಮಾತ್ರ ಗುಂಡು ಹಾರಿಸಿದ್ದೇನೆ ನ್ಯಾಯಾಲಯದಲ್ಲಿ ತಪ್ಪೋಪ್ಪಿಕೊಂಡಿದ್ದಾನೆ. . ಎಪಿಐ ಪತ್ರಕರ್ತ ಬಿರ್ಲಾ ಹೌಸ್‌ನಲ್ಲಿ ೫.೪೦ ಕ್ಕೆ ಗಾಂಧಿ ನಿಧನರಾದರು ಎಂದು ಹೇಳಿದ್ದರು. ಅಂದರೆ, ಗುಂಡಿನ ದಾಳಿ ನಡೆದ ನಂತರವೂ ಅವರು ಇನ್ನೂ ೩೫ ನಿಮಿಷಗಳ ಕಾಲ ಜೀವಂತವಾಗಿದ್ದರು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅವರ ಟ್ವೀಟ್ ಗಳಿಗೆ ನೆಟಿಜನ್‌ಗಳಿಂದ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

ಈ ಹಿಂದೆ ಗಾಂಧಿ ಹತ್ಯೆ ಪ್ರಕರಣವನ್ನು ಮರು ವಿಚಾರಣೆ ನೆಡೆಸಬೇಕು ಎಂಬ ಬೇಡಿಕೆಗಳು ಬಂದಿದ್ದವು. ೨೦೧೭ ರ ಅಕ್ಟೋಬರ್‌ನಲ್ಲಿ ಮಾಹಿತಿ ತಂತ್ರಜ್ಞಾನ ತಜ್ಞ ಡಾ. ಪಂಕಜ್ ಕುಮುದ್ ಚಂದ್ರ ಫಡ್ನಿಸ್, ಗಾಂಧಿ ಹತ್ಯೆ ಪ್ರಕರಣದ ಪುನರ್ ವಿಚಾರಣೆ ಕೋರಿ ಸುಪ್ರೀಂ ಕೋರ್ಟಿಗೆ ಆರ್ಜಿ ಸಲ್ಲಿಸಿದ್ದರು. ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ನಾಲ್ಕನೇ ಗುಂಡು ಹಾರಿಸಿದ್ದಾನೋ ಇಲ್ಲವೋ ಎಂಬ ಬಗ್ಗೆ ಸ್ವಲ್ಪ ಅಸ್ಪಷ್ಟತೆ ಇದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು. ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ಗೋಡ್ಸೆ ಮತ್ತು ದತ್ತಾತ್ರೇಯ ಆಪ್ಟೆ ಅವರನ್ನು ೧೫ ನವೆಂಬರ್ ೧೯೪೯ ರಂದು ಗಲ್ಲಿಗೇರಿಸಲಾಗಿತ್ತು. 

ದೇಶದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ೭೧ ದಿನಗಳ ಮೊದಲು ಈ ಘಟನೆ ಸಂಭವಿಸಿತ್ತು. ಆ ಸಮಯದಲ್ಲಿ ಸುಪ್ರೀಂ ಕೋರ್ಟ್ ಇಲ್ಲವಾದ ಕಾರಣ ಪೂರ್ವ ಪಂಜಾಬ್ ಹೈಕೋರ್ಟ್ ವಿಧಿಸಿದ್ದ ಮರಣದಂಡನೆ ಶಿಕ್ಷೆ ಪ್ರಶ್ನಿಸಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಆದರೆ, ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com