ದೆಹಲಿ ಸಿಎಎ ರಕ್ತಪಾತ: ಹಿಂಸಾಚಾರ ಪ್ರಕರಣ ವಿಚಾರಣೆ ನಡೆಸಿದ ದೆಹಲಿ 'ಹೈ', ಗಾಯಾಳುಗಳ ಚಿಕಿತ್ಸೆಗೆ ಪೊಲೀಸರಿಗೆ ಸೂಚನೆ
ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್ ಮಂಗಳವಾರ ತಡರಾತ್ರಿ ವಿಚಾರಣೆ ನಡೆಸಿದ್ದು ಜನರಿಗೆ ರಕ್ಷಣೆ ಒದಗಿಸುವಂತೆ ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
Published: 26th February 2020 10:30 AM | Last Updated: 26th February 2020 10:30 AM | A+A A-

ಸಂಗ್ರಹ ಚಿತ್ರ
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್ ಮಂಗಳವಾರ ತಡರಾತ್ರಿ ವಿಚಾರಣೆ ನಡೆಸಿದ್ದು ಜನರಿಗೆ ರಕ್ಷಣೆ ಒದಗಿಸುವಂತೆ ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಪೌರತ್ವ ತಿದ್ದುಪಡಿ ಪರ-ವಿರೋಧವಾಗಿ ಈಶಾನ್ಯ ದೆಹಲಿಯಲ್ಲಿ ಶನಿವಾರ ಸಣ್ಣ ಪ್ರಮಾಧಲ್ಲಿ ಆರಂಭವಾಗಿ, ಭಾನುವಾರ-ಸೋಮವಾರಗಳಂದು ಹಿಂಸಾಚಾರ ರೂಪ ಪಡೆದುಕೊಂಡಿದ್ದ ಪ್ರತಿಭಟನೆ, ಮಂಗಳವಾರ ರಕ್ತಪಾತಕ್ಕೆ ಕಾರಣವಾಗಿತ್ತು. ಮಂಗಳವಾರ ಬೆಳಿಗ್ಗೆಯಿಂದಲೂ ಜಫ್ರಾಬಾದ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಹಿಂಸಾಚಾರ ನಡೆದು, 17 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 50 ಪೊಲೀಸರು ಸೇರಿದಂತೆ 180 ಮಂದಿ ಗಾಯಗೊಂಡಿದ್ದು, ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಹಿಂಸಾಚಾರ ಹತ್ತಿಕ್ಕಲು ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಜಫ್ರಾಬಾದ್, ಮೌಜ್ ಪುರ, ಭಜನ್ ಪುರ ಚೌಕ್, ಚಾಂದ್ ಬಾಗ್, ಕರ್ವಾಲ್ ನಗರ್, ಖುರೇಜಿ ಖಾಸ್, ಬಾಬರ್ ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹಿಂಸಾಚಾರ ಪ್ರಕರಣ ಕುರಿತು ಮಧ್ಯರಾತ್ರಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ಗಲಭೆಯಲ್ಲಿ ಗಾಯಗೊಂಡವರಿಗೆ ಕೂಡಲೇ ವೈದ್ಯಕೀಯ ನೆರವು ಒದಗಿಸಿ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.