ದೆಹಲಿ ಮತದಾರರನ್ನು ಸೆಳೆಯಲು ರಾಮಮಂದಿರ, ಸಿಎಎ ಮತ್ತು 370ನೇ ವಿಧಿ ಪ್ರಸ್ತಾಪಿಸಿದ ಅಮಿತ್ ಶಾ

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಜನರನ್ನು ಹಾದಿ ತಪ್ಪಿಸುತ್ತಿದ್ದು, ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಇಂದು ನಡೆದ ಸಭೆಯೊಂದರಲ್ಲಿ ಪ್ರಮುಖ ವಿಷಯಗಳಾದ ರಾಮಮಂದಿರ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು 370ನೇ ವಿಧಿ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ 370ನೇ ವಿಧಿ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು. 

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸಿದ ಅಮಿತ್ ಶಾ, ಕಳೆದ ಐದು ವರ್ಷಗಳಲ್ಲಿ ದೆಹಲಿ ಜನತೆಗೆ ನಿಜವಾಗಿಯೂ ಮಾಡಿದ ಕೆಲಸಗಳ ಬಗ್ಗೆ ಆಮ್ ಆದ್ಮಿ ಪಕ್ಷದ ನಾಯಕರು ಜನರಿಗೆ ಹೇಳಬೇಕು. 20 ಕಾಲೇಜುಗಳನ್ನು, 5,000 ಶಾಲೆಗಳನ್ನು ಸ್ಥಾಪಿಸುವುದಾಗಿ ಕೇಜ್ರಿವಾಲ್ ಹೇಳಿದ್ದರು. ಇವುಗಳಲ್ಲಿ ಒಂದೂ ಸಹ ಸ್ಥಾಪನೆಯಾಗಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, 1984ರಲ್ಲಿ ಸಿಖ್ಬರ ವಿರುದ್ಧ ಹಿಂಸಾಚಾರ ನಡೆಸಿದ ಕಾಂಗ್ರೆಸ್, ಆ ಸಮುದಾಯದ ನೋವು ಅಳಿಸುವ ಯಾವುದೇ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ನರೇಂದ್ರಮೋದಿ ಸರ್ಕಾರ ಗಲಭೆಗಳಲ್ಲಿನ ಸಂತ್ರಸ್ತರಿಗೆ ತಲಾ ಐದು ಲಕ್ಷ ಪರಿಹಾರವನ್ನು ನೀಡಿದೆ. ತಪ್ಪಿತಸ್ಥರನ್ನು ಜೈಲಿಗೆ ತಳ್ಳಿದೆ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಮೋದಿ ಸರ್ಕಾರ ಜಾರಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶ ಪ್ರಶ್ನಿಸುತ್ತಿರುವವರಿಗೆ ಇದು ಸ್ಪಷ್ಟ ನಿದರ್ಶನವಾಗಿದೆ ಈಗ ಹೇಳಿ ಪಾಕಿಸ್ತಾನದಲ್ಲಿ ದಾಳಿಗಳಿಗೆ ಗುರಿಯಾಗಿರುವ ಸಿಖ್ಖರು ಎಲ್ಲಿಗೆ ಹೋಗಬೇಕು. ಅವರು ಭಾರತಕ್ಕೇ ಬರಬೇಕು  ಎಂದು ಅಮಿತ್ ಶಾ ಹೇಳಿದರು.

ಅಲ್ಪಸಂಖ್ಯಾತರಿಗೆ ಒಂದು ವಿಷಯವನ್ನು ಹೇಳಲು ಇಚ್ಛಿಸುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದ ಯಾವುದೇ ಪ್ರಜೆಯ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ. ಈ ಮೂಲಕ ಗಲಭೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ದೂರಿದರು

ಸಿಎಎಯಿಂದ ಅಲ್ಪಸಂಖ್ಯಾತ ಸಮುದಾಯದ ಯಾವೊಬ್ಬ ವ್ಯಕ್ತಿಯು ಪೌರತ್ವ ಕಳೆದುಕೊಳ್ಳುವುದಿಲ್ಲ ನೆರೆಯ ಮೂರು ರಾಷ್ಟ್ರಗಳಿಂದ ವಲಸೆ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾನೂನು ಇದಾಗಿದೆ. ಪೌರತ್ವವನ್ನು ಯಾರಿಂದಲೂ ಕಸಿದುಕೊಳ್ಳುವುದಿಲ್ಲ ಎಂದು ಅಮಿತ್ ಶಾ ಭರವಸೆ ನೀಡಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಕಳೆದ ಐದು ವರ್ಷಗಳ ಹಿಂದೆ ಭರವಸೆಗಳ ಹೆಸರಲ್ಲಿ ಜನರನ್ನು ಹಾದಿ ತಪ್ಪಿಸುವ ಮೂಲಕ ಅವರು  ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿದರು. 

ಕೆಲವರು ಒಂದು ಬಾರಿ ಮಾತ್ರ ಜನರನ್ನು ಹಾದಿತಪ್ಪಿಸಬಹುದು, ಆದರೆ, ಎಲ್ಲಾ ಸಮಯದಲ್ಲೂ ಹಾಗೆ ಹಾಗಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com