2018ರಲ್ಲಿ ಪ್ರತಿ ನಿತ್ಯ 80 ಕೊಲೆ, 289 ಕಿಡ್ನಾಪ್, 91 ಅತ್ಯಾಚಾರ!

2018ರಲ್ಲಿ ಪ್ರತಿ ನಿತ್ಯ 80 ಕೊಲೆ, 289 ಕಿಡ್ನಾಪ್ ಮತ್ತು 91 ಅತ್ಯಾಚಾರವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಷ್ಟ್ರೀಯ ಅಪರಾಧ ದಾಖಲೆಗಳ ದಳದಿಂದ ವರದಿ ಬಿಡುಗಡೆ

ನವದೆಹಲಿ: 2018ರಲ್ಲಿ ಪ್ರತಿ ನಿತ್ಯ 80 ಕೊಲೆ, 289 ಕಿಡ್ನಾಪ್ ಮತ್ತು 91 ಅತ್ಯಾಚಾರವಾಗಿದೆ.

ಹೌದು.. 2018ರಲ್ಲಿ ದೇಶದಲ್ಲಿ ಪ್ರತಿ ನಿತ್ಯ 80 ಕೊಲೆ, 289 ಕಿಡ್ನಾಪ್ ಮತ್ತು 91 ಅತ್ಯಾಚಾರವಾಗಿದ್ದು, ಈ ಕುರಿತಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ದಳ (National Crime Records Bureau-NCRB) 2018ರ ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದೆ. ಅದರಂತೆ 2018ರಲ್ಲಿ ದೇಶದ್ಯಂತ ಪ್ರತಿ ನಿತ್ಯ 80 ಕೊಲೆ, 289 ಕಿಡ್ನಾಪ್ ಮತ್ತು 91 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

NCRB ವರದಿಯಲ್ಲಿರುವಂತೆ 2018ರಲ್ಲಿ 50,74,634 ಅರಿವಿನ ಅಪರಾಧಗಳು (cognizable crimes) ದಾಖಲಾಗಿದ್ದು, ಈ ಪೈಕಿ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ 31,32,954 ಅಪರಾಧ ಪ್ರಕರಣಗಳು ಮತ್ತು ವಿಶೇಷ ಮತ್ತು ಸ್ಥಳೀಯ ಕಾನೂನುಗಳ ಅಡಿಯಲ್ಲಿ 19,41,680 ಪ್ರಕರಣಗಳು ದಾಖಲಾಗಿವೆ. 2017ರಲ್ಲಿ  50,07,044 ಪ್ರಕರಣಗಳು ದಾಖಲಾಗಿತ್ತು.

2017ರಲ್ಲಿ ದಾಖಲಾದ ಅಪರಾಧ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ, 2018ರಲ್ಲಿ ಶೇ.1.3ರಷ್ಟು ಅಂದರೆ 29,017 ಹೆಚ್ಚುವರಿ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಗರಿಷ್ಠ ಪ್ರಮಾಣದಲ್ಲಿ (9,623 ಪ್ರಕರಣಗಳು)ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ಬಳಿಕ ವೈಯಕ್ತಿಕ ಕಾರಣ ಅಥವಾ ದ್ವೇಷಕ್ಕೆ ಸಂಬಂಧಿಸಿದ (3,875) ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಅಪಹರಣಕ್ಕೆ ಸಂಬಂದಿಸಿದ ಪ್ರಕರಣಗಳ ಸಂಖ್ಯೆ 2018ರಲ್ಲಿ ಶೇ.10ರಷ್ಟು ಹೆಚ್ಚಾಗಿದ್ದು, 1,05,734 ಎಫ್ ಐ ಆರ್ ಗಳು ದಾಖಲಾಗಿವೆ. 2017ರಲ್ಲಿ ಈ ಸಂಖ್ಯೆ  95,893ರಷ್ಟಿತ್ತು. 2016ರಲ್ಲಿ ಇದೇ ಪ್ರಕರಣಗಳ ಸಂಖ್ಯೆ 88,008ರಷ್ಟಿತ್ತು.

NCRB ವರದಿಯ ಅನ್ವಯ 2018ರಲ್ಲಿ ಒಟ್ಟು 1,05,536 ಅಪಹರಣ ಪ್ರಕರಣಗಳು (24,665 ಪುರುಷರು ಮತ್ತು 80,871 ಮಹಿಳೆಯರು) ದಾಖಲಾಗಿದ್ದು, ಈ ಪೈಕಿ 63,356 (15,250 ಗಂಡು ಮತ್ತು 48,106 ಹೆಣ್ಣು) ಮಕ್ಕಳಿಗೆ ಸಂಬಂಧಿಸಿದ್ದಾಗಿದೆ. ಅಂತೆಯೇ ಅಪಹರಣಕ್ಕೊಳಗಾದವರ ಪೈಕಿ 32,765 ಮಹಿಳೆಯರು ವಯಸ್ಕರಾಗಿದ್ದಾರೆ. ಈ ಪೈಕಿ 92,137 ಪ್ರಕರಣಗಳು (22,755 ಪುರುಷರು ಮತ್ತು 69,382 ಮಹಿಳೆಯರು) ಇತ್ಯರ್ಥವಾಗಿದ್ದು, ಇದರಲ್ಲಿ 91,709  ಮಂದಿ ಜೀವಂತವಾಗಿ ಸಿಕ್ಕಿದ್ದರೆ, 428 ಮಂದಿ ಶವವಾಗಿ ಸಿಕ್ಕಿದ್ದಾರೆ.

ಇನ್ನು 2018ರಲ್ಲಿ 3,78,277 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿದ್ದು, 2017ರಲ್ಲಿ ಇದೇ ಸಂಖ್ಯೆ 3,59,849, ಮತ್ತು 2016ರಲ್ಲಿ 3,38,954 ರಷ್ಟಿತ್ತು. ಐಪಿಸಿ ಸೆಕ್ಷನ್ 376 (ಅತ್ಯಾಚಾರ)ರ ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 33,356ರಷ್ಟಿತ್ತು ಎಂದು NCRB ವರದಿಯಲ್ಲಿ ತಿಳಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com