ಹುತಾತ್ಮ ದಿನ; ಮಹಾತ್ಮಾ ಗಾಂಧೀಜಿಯ 72ನೇ ಪುಣ್ಯತಿಥಿ, ಪಿತಾಮಹನನ್ನು ಸ್ಮರಿಸಿದ ದೇಶದ ಗಣ್ಯರು 

ಪ್ರತಿವರ್ಷ ಜನವರಿ 30ನ್ನು ಹುತಾತ್ಮ ದಿನವೆಂದು ಕರೆಯಲಾಗುತ್ತದೆ. ಮಹಾತ್ಮಾ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ದೆಹಲಿಯ ಬಿರ್ಲಾ ಹೌಸ್ ನಲ್ಲಿ ಹತ್ಯೆ ಮಾಡಿದ ದಿನ ಇಂದು. 1948ನೇ ಇಸವಿ ಜನವರಿ 30ರಂದು ಅವರು ಹುತಾತ್ಮರಾಗಿದ್ದರು.ಅವರಿಗೆ ಆಗ 78 ವರ್ಷ ವಯಸ್ಸಾಗಿತ್ತು.
ಹುತಾತ್ಮ ದಿನ; ಮಹಾತ್ಮಾ ಗಾಂಧೀಜಿಯ 72ನೇ ಪುಣ್ಯತಿಥಿ, ಪಿತಾಮಹನನ್ನು ಸ್ಮರಿಸಿದ ದೇಶದ ಗಣ್ಯರು 

ನವದೆಹಲಿ:ಪ್ರತಿವರ್ಷ ಜನವರಿ 30ನ್ನು ಹುತಾತ್ಮ ದಿನವೆಂದು ಕರೆಯಲಾಗುತ್ತದೆ. ಮಹಾತ್ಮಾ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ದೆಹಲಿಯ ಬಿರ್ಲಾ ಹೌಸ್ ನಲ್ಲಿ ಹತ್ಯೆ ಮಾಡಿದ ದಿನ ಇಂದು. 1948ನೇ ಇಸವಿ ಜನವರಿ 30ರಂದು ಅವರು ಹುತಾತ್ಮರಾಗಿದ್ದರು.ಅವರಿಗೆ ಆಗ 78 ವರ್ಷ ವಯಸ್ಸಾಗಿತ್ತು.

ಭಾರತ ವಿಭಜನೆಯ ವಿಚಾರದಲ್ಲಿ ನಾಥೂರಾಮ್ ಗೋಡ್ಸೆ ಗಾಂಧೀಜಿಯವರ ತತ್ವ, ಅಭಿಪ್ರಾಯಗಳನ್ನು ಒಪ್ಪಿರಲಿಲ್ಲ. ಇದರಿಂದ ಹತ್ಯೆ ಮಾಡಿದ್ದ ಎನ್ನಲಾಗುತ್ತಿದೆ. ಇನ್ನು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮದೇ ರೀತಿಯಲ್ಲಿ ತ್ಯಾಗಗಳನ್ನು ಮಾಡಿದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರನ್ನು ಗಲ್ಲಿಗೇರಿಸಿದ ದಿನವಾದ ಮಾರ್ಚ್ 23ನ್ನು ಸಹ ಹುತಾತ್ಮ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ.


ಇಂದು ದೆಹಲಿಯ ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ತೆರಳಿ ರಾಷ್ಟ್ರಪತಿ, ಪ್ರಧಾನಿ, ಹಿರಿಯ ನಾಯಕ ಎಲ್ ಕೆ ಆಡ್ವಾಣಿ, ಕೇಂದ್ರದ ಸಚಿವರುಗಳು, ಮೂರೂ ಸೇನಾಪಡೆ ಮುಖ್ಯಸ್ಥರು, ರಕ್ಷಣಾ ಪಡೆಯ ಮುಖ್ಯಸ್ಥರು ಪಿತಾಮಹನಿಗೆ ಗೌರವ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಪ್ರಧಾನಿಯಾದಿಯಾಗಿ ಹಲವು ಮುಖಂಡರು ಮಹಾತ್ಮಾ ಗಾಂಧಿಯವರ ಚಿಂತನೆ, ತ್ಯಾಗ-ಬಲಿದಾನಗಳನ್ನು ಸ್ಮರಿಸಿಕೊಂಡಿದ್ದಾರೆ.ಹುತಾತ್ಮ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹಾತ್ಮಾ ಗಾಂಧೀಜಿಯವರ ತ್ಯಾಗ, ಬಲಿದಾನಗಳನ್ನು ಸ್ಮರಿಸಿಕೊಂಡಿದ್ದಾರೆ. 


ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗಾಂಧೀಜಿಯವರಿಗೆ ಗೌರವ ಸಲ್ಲಿಸಿದರು.


"ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಬಾಪು ಅವರ ವ್ಯಕ್ತಿತ್ವ, ಸಿದ್ಧಾಂತ ಮತ್ತು ತತ್ವಗಳು ಯಾವಾಗಲೂ ಶ್ರೀಮಂತ ಭಾರತದ ಅಭ್ಯದಯಕ್ಕಾಗಿ ಪ್ರಯತ್ನಿಸಲು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ವಿಧಾನಸೌಧದ ಬಳಿ ಇರುವ ರಾಷ್ಟ್ರಪಿತನ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಸಿ.ಟಿ.ಪಾಟೀಲ್ ಸೇರಿದಂತೆ ಹಲವು ಗಣ್ಯರು ಈ ವೇಳೆ ಗೌರವ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದ ಅವರು ನುಡಿದಂತೆ ಬದುಕಿದ್ದ ಅಪರೂಪದ ಮಹಾನ್ ವ್ಯಕ್ತಿ. ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಸರ್ವ ಜನಾಂಗದ ಏಳಿಗೆಗಾಗಿ ದುಡಿದದ್ದು ಒಂದು ಇತಿಹಾಸ. ಅವರು ಒಬ್ಬ ವ್ಯಕ್ತಿ ಮಾತ್ರವಲ್ಲ ಮಹಾನ್ ಚೇತನವಾಗಿದ್ದರು ಎಂದು ಬಣ್ಣಿಸಿದರು.

ಮಹಾತ್ಮ ಗಾಂಧಿ ಅವರ ಹುತಾತ್ಮ ದಿನದ ಅಂಗವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಹಾತ್ಮ ಗಾಂಧೀಜಿ ಬದುಕಿದ ಸತ್ಯ, ಅಹಿಂಸೆ ಮತ್ತು ಶಾಂತಿಯ ಜೀವನ ಮೌಲ್ಯಗಳನ್ನು ನಮ್ಮದಾಗಿಸಿಕೊಂಡು ಮುನ್ನಡೆಯೋಣ. ಬಾಪು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದ ಕೋಮುಸೌಹಾರ್ದತೆಗೆ ಕಟಿಬದ್ಧರಾಗಿರೋಣ ಎಂದು ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯ ಅಂಗವಾಗಿ ನಗರದಲ್ಲಿ ಇಂದು ವಿವಿಧ ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

ಮಹಾತ್ಮಾ ಗಾಂಧಿ ಬಗ್ಗೆ; ಬಾಪೂಜಿ ಎಂದು ಕರೆಯಲ್ಪಡುವ ಮೋಹನ್ ದಾಸ ಕರಮಚಂದ ಗಾಂಧೀಜಿ ಹುಟ್ಟಿದ್ದು 1869ರ ಅಕ್ಟೋಬರ್ 2ರಂದು ಗುಜರಾತ್ ನ ಪೋರಬಂದರ್ ನಲ್ಲಿ. ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಗುಜರಾತ್ ಮತ್ತು ಬಾಂಬೆ ಯೂನಿವರ್ಸಿಟಿಯಲ್ಲಿ ಪೂರೈಸಿದರು. ನಂತರ 1888ರ ಸೆಪ್ಟೆಂಬರ್ 4ರಂದು ಲಂಡನ್ ಗೆ ಹೋಗಿ ಬ್ಯಾರಿಸ್ಟರ್ ಆದರು. 


1893ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಈ ಸಂದರ್ಭದಲ್ಲಿ ವರ್ಣಬೇಧ ತಾರತಮ್ಯವನ್ನು ಎದುರಿಸಿದರು. ನಂತರ 1916ರಲ್ಲಿ ಭಾರತಕ್ಕೆ ಮರಳಿ ನಂತರ ತಮ್ಮ ಜೀವನವಿಡೀ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಂಪರಣ್ ಚಳವಳಿ 1918ರದ್ದು ಮೊಟ್ಟಮೊದಲ ಹೋರಾಟವಾಗಿದೆ. 


1920ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ ಅಸಹಕಾರ ಚಳವಳಿ ಪ್ರಮುಖವಾದದ್ದು. ಆದರೆ ಚಳವಳಿ ಸಮಯದಲ್ಲಿ ಕೆಲವು ಹಿಂಸಾಚಾರಗಳು ನಡೆದು ಅದು ಯಶಸ್ವಿಯಾಗಲಿಲ್ಲ. ನಂತರ ಮಹಾತ್ಮಾ ಗಾಂಧಿಯವರು ಕಾನೂನು ಅಸಹಕಾರ ಚಳವಳಿಯನ್ನು 1930ರಲ್ಲಿ ತಂದರು. ಅದನ್ನು ದಂಡಿ ಯಾತ್ರೆ ಎಂದು ಕರೆಯಲಾಯಿತು. 


1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ಕೊಟ್ಟರು. ಅವರ ಜೀವನದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಅತಿದೊಡ್ಡ ಯಶಸ್ಸನ್ನು ತಂದುಕೊಟ್ಟಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com