ಕಾನ್ಪುರ ಎನ್'ಕೌಂಟರ್: ಪ್ರಮುಖ ಆರೋಪಿ ವಿಕಾಸ್ ದುಬೆ 4 ಸಹಚರರ ಬಂಧನ, ಇನಾಮು ಮೊತ್ತ ರೂ. 5 ಲಕ್ಷಕ್ಕೆ ಏರಿಕೆ
ಭೋಪಾಲ್: ಕಾನ್ಪುರ ಎನ್'ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಕಾಸ್ ದುಬೆಯ ನಾಲ್ವರು ಸಹಚರರನ್ನು ಉತ್ತರಪ್ರದೇಶ ರಾಜ್ಯದ ಎಸ್'ಟಿಎಫ್ ಅಧಿಕಾರಿಗಳು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಮಧ್ಯಪ್ರದೇಶದ ಶಹ್ದೋಲ್ ಜಿಲ್ಲೆಯಲ್ಲಿ ನೆಲೆಯೂರಿದ್ದ ವಿಕಾಸ್ ದುಬೆ ಸಂಬಂಧಿಯೊಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಉತ್ತರಪ್ರದೇಶ ಎಸ್'ಟಿಎಫ್ ಅಧಿಕಾರಿಗಳು ವಿಕಾಸ್ ದುಬೆ ಮೈದುನ ರಾಜು ನಿಗಮ್ (ವಿಕಾಸ್ ದುಬೆ ಪತ್ನಿಯ ಸಹೋದರ)ನ್ನು ಹಾಗೂ ಅವರ ಪುತ್ರ ಆದರ್ಶ್ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದರು.
ಇದೀಗ ತಲೆಮರೆಸಿಕೊಂಡಿರುವ ಗ್ಯಾಂಗ್'ಸ್ಟರ್ ವಿಕಾಸ್ ದುಬೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು, ಗ್ಯಾಂಗ್'ಸ್ಟರ್'ಗಾಗಿ ಈ ಹಿಂದೆ ಘೋಷಣೆ ಮಾಡಲಾಗಿದ್ದ ಇನಾಮು ಮೊತ್ತವನ್ನು ರೂ.2.5 ಲಕ್ಷದಿಂದ ರೂ.5ಲಕ್ಷಕ್ಕೆ ಏರಿಕೆ ಮಾಡಿದ್ದಾರೆ.
ಬಂಧನದ ಬಳಿಕ ಹೇಳಿಕೆ ನೀಡಿರುವ ರಾಜು ನಿಗಮ್, ಕಳೆದ 15 ವರ್ಷಗಳಿಂದ ವಿಕಾಸ್ ದುಬೆ ಜೊತೆಗೆ ಸಂಪರ್ಕದಲ್ಲಿರಲಿಲ್ಲ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ರಾಜ್ಯದಲ್ಲಿ 60 ಅಪರಾಧ ಕೇಸುಗಳಿದ್ದ ವಿಕಾಸ್ ದುಬೆ ಎಂಬ ಪಾತಕಿಯನ್ನು ಬಂಧಿಸಲು ಪೊಲೀಸರು ದಿಕ್ರು ಎಂಬ ಗ್ರಾಮಕ್ಕೆ ಕಳೆದ ಶುಕ್ರವಾರ ನಸುಕಿನ ಜಾವ ತೆರಳಿದಾಗ ಮೊದಲ ಎನ್'ಕೌಂಟರ್ ನಡೆದಿತ್ತು. ಪೊಲೀಸರು ಬರುವ ಸುಳಿವು ಅರಿತಿದ್ದ ವಿಕಾಸ್ ದುಬೆ ಸಹಚರರು, ರಸ್ತೆಗೆ ಅಡ್ಡಲಾಗಿ ಕಲ್ಲು-ಕಟ್ಟಿಗೆಗಳನ್ನು ಇಟ್ಟಿದ್ದರು.
ಪೊಲೀಸರು ಇವನ್ನು ತೆರವುಗೊಳಿಸಿ ದುಬೆ ಅವಿತಿದ್ದ ಮನೆಯತ್ತ ಆಗಮಿಸಲು ಅಣಿಯಾಗುತ್ತಿದ್ದಂತೆಯೇ ಆತನ ಮನೆಯ ಮೇಲಿಂದ ಕ್ರಿಮಿನಲ್'ಗಳು ಗುಂಡಿನ ಮಳೆಗೆರೆದಿದ್ದಾರೆ. ಆಗ ಗುಂಡೇಟು ತಿಂದ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೇದೆಗಳು ಅಸುನೀಗಿದ್ದರು.
ಕ್ರಿಮಿನಲ್ ಗಳು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು. ಪೊಲೀಸರು ಈ ಹಿಂದೆ ಹೊಂದಿದ್ದ ಶಸ್ತ್ರಾಸ್ತ್ರಗಳು ದುಬೆಗೆ ದೊರೆತಿದ್ದು, ಅವುಗಳನ್ನೇ ಪೊಲೀಸರ ಮೇಲೆ ದಾಳಿ ನಾಡಲು ದುಬೆ ಸಹಚರರು ಬಳಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರೇಮ್ ಪ್ರಕಾಶ್ ಪಾಂಡೆ ಹಾಗೂ ಅತುಲ್ ದುಬೆ ಎಂಬ ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ