ದೆಹಲಿ ಹಿಂಸಾಚಾರ: ನಿಶ್ಶಸ್ತ್ರಧಾರಿ ಪೊಲೀಸ್‌ಗೆ 'ಗನ್ ಪಾಯಿಂಟ್'ನಲ್ಲಿ ಬೆದರಿಸಿದ್ದ ಆರೋಪಿ ಶಾರುಖ್ ಬಂಧನ!

ದೆಹಲಿ ಹಿಂಸಾಚಾರದ ವೇಳೆ ನಿಶಸ್ತ್ರದಾರಿಯಾಗಿದ್ದ ಪೊಲೀಸ್‌ಗೆ 'ಗನ್ ಪಾಯಿಂಟ್'ನಲ್ಲಿ ಬೆದರಿಸಿ ಆತಂಕ ಸೃಷ್ಟಿಸಿ ತಲೆಮರೆಸಿಕೊಂಡಿದ್ದ ಆರೋಪಿ ಶಾರುಖ್ ನನ್ನು ಪೊಲೀಸರು ಉತ್ತರಪ್ರದೇಶದ ಬರೇಲಿಯಲ್ಲಿ ಬಂಧಿಸಿದ್ದಾರೆ. 
ಬಂಧಿತ ಆರೋಪಿ
ಬಂಧಿತ ಆರೋಪಿ

ನವದೆಹಲಿ: ದೆಹಲಿ ಹಿಂಸಾಚಾರದ ವೇಳೆ ಪೊಲೀಸ್‌ಗೆ 'ಗನ್ ಪಾಯಿಂಟ್'ನಲ್ಲಿ ಬೆದರಿಸಿ ಆತಂಕ ಸೃಷ್ಟಿಸಿ ತಲೆಮರೆಸಿಕೊಂಡಿದ್ದ ಆರೋಪಿ ಶಾರುಖ್ ನನ್ನು ಪೊಲೀಸರು ಉತ್ತರಪ್ರದೇಶದ ಬರೇಲಿಯಲ್ಲಿ ಬಂಧಿಸಿದ್ದಾರೆ. 

ಫೆಬ್ರವರಿ 24ರಂದು ದೆಹಲಿಯ ಮೌಜ್ ಪುರದಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ 33 ವರ್ಷದ ಶಾರುಖ್ ನಿಶಸ್ತ್ರದಾರಿಯಾಗಿ ಒಬ್ಬಂಟಿಯಾಗಿದ್ದ ದೆಹಲಿಯ ಪೊಲೀಸ್ ಗೆ ಗನ್ ತೋರಿಸಿ ಮುಂದೆ ಬರದಂತೆ ಬೆದರಿಕೆ ಹಾಕಿದ್ದ. ಇದೇ ಅಲ್ಲದೆ ತಾನೇ ಮುಂದೆ ಬಂದು ನಿಂತಿದ್ದ ಪೊಲೀಸ್ ಹಣೆಗೆ ಗುಂಡಿಕ್ಕುವುದಾಗಿ ಬೆದರಿಸಿದ್ದ. ಈ ವೇಳೆ ಧೈರ್ಯ ಪ್ರದರ್ಶಿಸಿದ್ದ ಪೊಲೀಸ್ ಅಲುಗಾಡದೇ ಸುಮ್ಮನೆ ನಿಂತಿದ್ದರಿಂದ ಶಾರುಖ್ ಆರೇಳು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಹಿಂದಕ್ಕೆ ಸರಿದಿದ್ದ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ದೇಶವನ್ನೇ ಬೆಚ್ಚಿಬೀಳಿಸಿತ್ತು. 

ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ದೆಹಲಿ ಪೊಲೀಸರು ಎಎಪಿ ಮುಖಂಡ ತಾಹೀರ್ ಮತ್ತು ಶಾರುಕ್ ನನ್ನು ಬಂಧಿಸಿರುವುದು ತನಿಖೆಗೆ ಬಲ ತಂದಿದೆ. ಇನ್ನು ಇವರಿಬ್ಬರ ನಡುವಿನ ಸಂಪರ್ಕಗಳು ತನಿಖೆಯಲ್ಲಿ ಬಯಲಾಗಿವೆ ಎಂದರು. 

ಶಾರುಖ್ ಅವರ ಮನೆಯಲ್ಲಿ ಅನೇಕ ಅನುಮಾನಾಸ್ಪದ ಲೇಖನಗಳು ಕಂಡುಬಂದಿವೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ಪಾಲಿಥೀನ್‌ಗಳಲ್ಲಿ ಉರಿಯುವ ವಸ್ತುಗಳು ಪತ್ತೆಯಾಗಿದ್ದರೆ, ತಾಹಿರ್ ಮನೆಯಿಂದ ಆಸಿಡ್ ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ದಾಳಿ ನಡೆಸಿದ್ದ ವೇಳೆ ಕೆಲವು ಮನೆಗಳು ಮತ್ತು ಬೀದಿಗಳಿಂದ ದೊಡ್ಡ ಪೆಟ್ರೋಲ್ ಮತ್ತು ಡೀಸೆಲ್ ಕ್ಯಾನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾವಿರಾರು ಮೆಣಸಿನ ಪುಡಿ ಪ್ಯಾಕೆಟ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇವುಗಳ ಹೊರತಾಗಿ, 20-20 ಕೆಜಿ ಕಬ್ಬಿಣದ ಮೊಳೆಗಳು ಮತ್ತು ಗಾಜಿನ ಗೋಲಿಗಳು ಕಂಡುಬಂದಿವೆ. ಪೆಟ್ರೋಲ್ ಬಾಂಬ್ ತಯಾರಿಸಲು ಈ ವಸ್ತುಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

ಹಿಂಸಾಚಾರದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದ ಸದಸ್ಯ ಅಧಿಕಾರಿಯೊಬ್ಬರು ಮಾತನಾಡಿ, "ಸ್ಥಳೀಯವಾಗಿ ತಯಾರಿಸಿದ ಕವಣೆಗಳು, ಜಾಫ್ರಾಬಾದ್ ಮತ್ತು ಮುಸ್ತಾಬಾದ್‌ನ ಅನೇಕ ಮನೆಗಳ ಚಾವಣಿಗಳ ಮೇಲೆ ಸಿಕ್ಕಿವೆ. ಈ ಕವಣೆಗಳನ್ನು ಬಳಸಿ 100 ಮೀಟರ್ ದೂರದವರೆಗೆ ಪೆಟ್ರೋಲ್, ಆಸಿಡ್ ಮತ್ತು ಮೆಣಸಿನಕಾಯಿ ಬಾಂಬುಗಳನ್ನು ಎಸೆದಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದರು. 

ಈ ಸಂಬಂಧ ಸುಮಾರು 200 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಈ ಪೈಕಿ 40 ಕೊಲೆ ಸಂಬಂಧಿತ ಸೆಕ್ಷನ್ ಗಳಿವೆ. ಈ ಎಫ್‌ಐಆರ್‌ಗಳಲ್ಲಿ ಹಿಂಸಾಚಾರ, ಶಸ್ತ್ರಾಸ್ತ್ರ ಕಾಯ್ದೆ, ಕೊಲೆ ಯತ್ನ, ಸರ್ಕಾರಿ ಆಸ್ತಿಗೆ ಹಾನಿ ಮತ್ತು ಸರ್ಕಾರದ ಕೆಲಸಕ್ಕೆ ಅಡ್ಡಿಯುಂಟು ಮಾಡಿದ ಆರೋಪಗಳಿವೆ. ಹಿಂಸಾಚಾರ ಸಂಬಂಧ ಈವರೆಗೆ ಸುಮಾರು 1000 ಜನರನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com