ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು; ಪರಿಸ್ಥಿತಿ ಹತೋಟಿಯಲ್ಲಿದ್ದು, ಶಾಸಕರು ಶೀಘ್ರ ವಾಪಸಾಗಲಿದ್ದಾರೆ: ಸಿಎಂ ಕಮಲ್ ನಾಥ್
ಭೋಪಾಲ್: ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟಿಗೆ ಸಂಬಂದಿಸಿದಂತೆ ಸಿಎಂ ಕಮಲ್ ನಾಥ್ ಅವರು ಪ್ರತಿಕ್ರಿಯೆ ನೀಡಿದ್ದು, ಪರಿಸ್ಥಿತಿ ಹತೋಟಿಯಲ್ಲಿದ್ದು, ಶಾಸಕರು ಶೀಘ್ರ ವಾಪಸಾಗಲಿದ್ದಾರೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಜರುಗಿದ ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಲ್ವರು ಶಾಸಕರು ಹಾಗೂ ಸರ್ಕಾರ ಕ್ಕೆ ಬೆಂಬಲ ನೀಡಿದ್ದ ನಾಲ್ವರು ಪಕ್ಷೇತರರು ಸೇರಿದಂತೆ 8 ಶಾಸಕರನ್ನು ರಾಜ್ಯದ ಪ್ರಭಾವಿ ಮಾಜಿ ಸಚಿವರೊಬ್ಬರು ಬಲವಂತವಾಗಿ ಗುರುಗ್ರಾಮ ಹೋಟೆಲ್ ನಲ್ಲಿ ಕೂಡಿಹಾಕಿದ್ದಾರೆ ಎಂದು ಆಡಳಿತ ಪಕ್ಷ ಗಂಭೀರ ಆರೋಪ ಮಾಡಿದೆ. ಕಾಂಗ್ರೆಸ್ ಪಕ್ಷದ ಶಾಸಕರಿಗೆ ಬಿಜೆಪಿ ಲಂಚದ ಆಮಿಷ ಒಡ್ಡಿ, ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಆಪಾದಿಸಿದ ಬೆನ್ನಲ್ಲೇ ಈ ಘಟನೆ ಜರುಗಿದೆ.
ಕಾಂಗ್ರೆಸ್ ನ 8 ಶಾಸಕರು ಬಿಜೆಪಿ ಸೇರುವ ಭಯದಿಂದ ಅವರಿಗೆ ದಿಗ್ಭಂಧನ ಹೇರಲಾಗಿದೆ. ಖಾಸಗಿ ಹೊಟೆಲ್ ನಲ್ಲಿ ಕಾಂಗ್ರೆಸ್ ಶಾಸಕರನ್ನು ಇರಿಸಲಾಗಿದ್ದು, ಈ ಪೈಕಿ ಆರು ಶಾಸಕರು ರಾತ್ರೋ ರಾತ್ರಿ ಹೊಟೆಲ್ ನಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಕಮಲ್ ನಾಥ್ ಅವರು, ಮಧ್ಯ ಪ್ರದೇಶದಲ್ಲಿ ಹಾಲಿ ರಾಜಕೀಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಹೊಟೆಲ್ ನಿಂದ ಹೊರ ಹೋಗಿರುವ ಎಲ್ಲ ಶಾಸಕರೂ ಶೀಘ್ರವೇ ವಾಪಸ್ ಆಗಲಿದ್ದಾರೆ. ಅಂತೆಯೇ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಇಲ್ಲ ಎಂದು ಹೇಳಿದ್ದಾರೆ.
ಶಾಸಕರಿಗೆ ಹಣದ ಆಮಿಷ
ರಾಜ್ಯಸಭೆಗೆ ಮಧ್ಯ ಪ್ರದೇಶದಿಂದ ಮೂವರು ಸದಸ್ಯರ ಆಯ್ಕೆಗಾಗಿ ಮಾರ್ಚ್ 26ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಿದೆ. ಬಿಜೆಪಿಯು ಹಣದ ಆಮಿಷವೊಡ್ಡುತ್ತಿದೆ ಎಂದು ಅನೇಕ ಶಾಸಕರು ನನ್ನ ಬಳಿ ಹೇಳಿದ್ದಾರೆ. 15 ವರ್ಷಗಳ ಆಡಳಿತದ ವೇಳೆ ಮಾಡಿದ್ದ ಅಕ್ರಮಗಳು ಈಗ ಬಯಲಾಗಬಹುದು ಎಂಬ ಆತಂಕ ಬಿಜೆಪಿಯವರಲ್ಲಿದೆ. ಹೀಗಾಗಿ ಅವರು ಸರ್ಕಾರ ಪತನಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕಮಲನಾಥ್ ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ