ಬಾಗಲಕೋಟೆ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಶಾಂತಗೌಡ ಪಾಟೀಲ ಅಧಿಕಾರ ಸ್ವೀಕಾರ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಬಾಗಲಕೋಟೆ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಶಾಂತಗೌಡ ಪಾಟೀಲ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಶಾಂತಗೌಡ ಪಾಟೀಲ ಅಧಿಕಾರ ಸ್ವೀಕಾರ
ಬಾಗಲಕೋಟೆ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಶಾಂತಗೌಡ ಪಾಟೀಲ ಅಧಿಕಾರ ಸ್ವೀಕಾರ

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಬಾಗಲಕೋಟೆ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಶಾಂತಗೌಡ ಪಾಟೀಲ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.

ಅದ್ಧೂರಿ ಸಮಾರಂಭದಲ್ಲಿ ಶಾಂತಗೌಡರು ಜಿಲ್ಲಾ ಬಿಜೆಪಿ ನೊಗವನ್ನು ಹೊತ್ತುಕೊಂಡಿದ್ದಾರೆ. ಅದು ಅಂದುಕೊಂಡಷ್ಟು ಹಗುರವಾಗಿಲ್ಲ. ಸಮಸ್ಯೆ ಹಾಗೂ ಸವಾಲುಗಳ ಭಾರದಿಂದ ಕೂಡಿದೆ ಎನ್ನುವುದು ಅವರಿಗೂ ಗೊತ್ತಿರುವ ಸಂಗತಿ.

ಬಾಗಲಕೋಟೆ ಜಿಲ್ಲೆ ಮೊದಲಿನಿಂದಲೂ ಕೇಸರಿ ಪಡೆಯ ಸುಪರ್ದಿಯಲ್ಲಿದೆ. ಮೇಲ್ನೋಟಕ್ಕೆ ಜಿಲ್ಲಾ ಬಿಜೆಪಿ ಪಾಳೆಯದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವಂತೆ ಕಾಣಿಸುತ್ತದೆ. ಆಂತರಿಕವಾಗಿ ಮಾತ್ರ ಮುಖಂಡರು, ಕಾರ್ಯಕರ್ತರಲ್ಲಿ ಅಸಮಾಧಾನ ಕುದಿಯುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಅಧಿಕಾರ ಎನ್ನುವುದು ಕೆಲವರ ಸ್ವತ್ತಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಒಳಗೊಳಗೆ ಅಧಿಕಾರ ವಂಚಿತರಾಗಿ ಕುದಿಯುತ್ತಿದ್ದಾರೆ. ಮೊದಲ ಸಾಲಿನ ಮುಖಂಡರು ಹಾಗೂ ಜನಪ್ರತಿನಿಧಿಗಳು ಸರ್ಕಾರದಲ್ಲಿ ನಮಗೂ ಅವಕಾಶಗಳನ್ನು ಕಲ್ಪಿಸಿಕೊಡಲಿ. ತಾವಷ್ಟೇ ಅನುಭವಿಸಿದರೆ ಹೇಗೆ?. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿಲ್ಲವೆ ಎನ್ನುವವರ ಸಂಖ್ಯೆ ಕಡಿಮೆ ಏನಿಲ್ಲ.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಆರು ತಿಂಗಳು ಗತಿಸಿದರೂ ಸಂಪುಟ ರಚನೆಯಲ್ಲಿ ಕಾಲ ಕಳೆದು ಹೋಗುತ್ತಿದೆ. ಈಗಲೂ ಸಂಪುಟ ವಿಸ್ತರಣೆ ಗೊಂದಲ ಮುಂದುವರಿದಿದೆ. ಉಳಿದವರಿಗೆ ಅಧಿಕಾರ ಯಾವಾಗ ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಸಚಿವಾಕಾಂಕ್ಷಿಗಳನ್ನು ಸಮಾಧಾನ ಪಡಿಸಿದ ಬಳಿಕವಷ್ಟೆ ನಿಗಮ, ಮಂಡಳಿಗಳ ನೇಮಕ ಆರಂಭಗೊಳ್ಳಲಿದ್ದು, ಅಷ್ಟರಲ್ಲಿ ಮೇಲ್ಮನೆಯಲ್ಲಿ ಡಜನ್‌ಗೂ ಅಧಿಕ ಸ್ಥಾನಗಳು ಖಾಲಿಯಾಗಲಿವೆ. ಆ ಸ್ಥಾನಗಳ ಮೇಲೆ ಜಿಲ್ಲೆಯ ಕೆಲವರು ಕಣ್ಣಿಟ್ಟಿದ್ದಾರೆ. ಹಾಗಾಗಿ ಜಿಲ್ಲೆಗೆ ಒಂದಾದರೂ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಮೊದಲ ಸವಾಲು ನೂತನ ಅಧ್ಯಕ್ಷರ ಮುಂದಿದೆ. ಜತೆಜತೆಗೆ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಚುನಾವಣೆ ಎದುರಾಗಲಿದ್ದು, ಈ ಚುನಾವಣೆಯಲ್ಲಿ ಮುಖಂಡರ ನಡುವೆ ಹೊಂದಾಣಿಕೆ ಮಾಡಿ, ಪಕ್ಷದ ಪರವಾಗಿನ ನಿದೇರ್ಶಕರನ್ನು ಆಯ್ಕೆ ಮಾಡಿಕೊಂಡು ಬರಬೇಕಾದ ಜವಾಬ್ದಾರಿ ಶಾಂತಗೌಡರ ಹೆಗಲೇರಲಿದೆ.

ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು ಈಗಾಗಲೇ ಜನಪ್ರತಿನಿಧಿಗಳಾದವರು, ಹಿರಿಯ ಮುಖಂಡರು ಪ್ರಯತ್ನ ಆರಂಭಿಸಿದ್ದಾರೆ. ಆಕಾಂಕ್ಷಿಗಳನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಪರಸ್ಪರ ಸಹಕಾರದ ಮೂಲಕ ಪಕ್ಷದ ಪರವಾಗಿನ ಮುಖಂಡರಿಗೆ ಮಣೆ ಹಾಕಿ, ಅವರೆಲ್ಲ ಆಯ್ಕೆಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಏತನ್ಮಧ್ಯೆ ನೂತನ ಅಧ್ಯಕ್ಷರು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಿಕೊಂಡು, ಇತರ ಮುಂಚೂಣಿ ಘಟಕದ ಪದಾಧಿಕಾರಿಗಳ ಆಯ್ಕೆಯ ಹೊಣೆಗಾರಿಕೆ ನಿಭಾಯಿಸಬೇಕಿದೆ.

ಈಗಾಗಲೇ ಸರ್ಕಾರದಲ್ಲಿ ಇದ್ದವರು, ಸರ್ಕಾರದ ಭಾಗವಾಗಲಿ ಹೊರಟವರನ್ನು ಸಮಾಧಾನ ಪಡಿಸಿ, ಪಕ್ಷವನ್ನು ಸಮರ್ಥವಾಗಿ ಸಂಘಟಿಸಿ ಮುನ್ನಡೆಸಿಕೊಂಡು ಹೋಗಬೇಕಿದೆ. ಜಿಲ್ಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಕೂಡ ಅತ್ಯಂತ ಸಮರ್ಥವಾಗಿದ್ದು, ಆ ಪಕ್ಷವನ್ನು ಎದುರಿಸುವ ಜತೆಗೆ ಇಲ್ಲಿನ ಹಲವಾರು ಸಮಸ್ಯೆಗಳಿಗೆ ಸರಕಾರದೊಂದಿಗೆ ಸೇರಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ, ಅಕ್ರಮ ಗಣಿಗಾರಿಕೆ, ನೆರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರದೊಟ್ಟಿಗೆ ಸೇರಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಿಗೆ ಪಕ್ಷದಿಂದ ಆಯ್ಕೆಗೊಂಡಿರುವ ಜನಪ್ರತಿನಿಧಿಗಳು, ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಹೇಗೆ ಸಹಕಾರ ನೀಡುತ್ತಾರೋ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ !.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com