ಬಿಜೆಪಿಯಿಂದ ಬೇರ್ಪಟ್ಟಿದ್ದು, ಹಿಂದುತ್ವದಿಂದಲ್ಲ: ರಾಮಮಂದಿರ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ಘೋಷಿಸಿದ ಉದ್ಧವ್ ಠಾಕ್ರೆ

ತಾವು ಬಿಜೆಪಿಯಿಂದ ಮಾತ್ರ ಬೇರ್ಪಟ್ಟಿದ್ದು, ಹಿಂದುತ್ವದಿಂದಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡಿದ್ದ ಉದ್ಧವ್ ಠಾಕ್ರೆ
ಅಯೋಧ್ಯೆಗೆ ಭೇಟಿ ನೀಡಿದ್ದ ಉದ್ಧವ್ ಠಾಕ್ರೆ

ಅಯೋಧ್ಯೆ: ತಾವು ಬಿಜೆಪಿಯಿಂದ ಮಾತ್ರ ಬೇರ್ಪಟ್ಟಿದ್ದು, ಹಿಂದುತ್ವದಿಂದಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ್ದ ಉದ್ಧವ್ ಠಾಕ್ರೆ ರಾಮಲಲ್ಲಾ  ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸೈದ್ಧಾಂತಿಕವಾಗಿ ವಿಭಿನ್ನವಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ನಮ್ಮ ಸರ್ಕಾರವು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂ ನೀಡಲಿದೆ ಎಂದು ಘೋಷಣೆ ಮಾಡಿದರು.

ತಾವು  ಪ್ರಕಟಿಸಿರುವ  ೧ ಕೋಟಿ ರೂಪಾಯಿ ದೇಣಿಗೆ  ರಾಜ್ಯ ಸರ್ಕಾರದಿಂದ ನೀಡುವುದಿಲ್ಲ, ಬದಲಾಗಿ ತಮ್ಮ ನೇತೃತ್ವದ  ಟ್ರಸ್ಟ್ ವತಿಯಿಂದ ನೀಡುವುದಾಗಿ  ಸ್ಪಷ್ಟಪಡಿಸಿದರು. ರಾಮ ಮಂದಿರ ನಿರ್ಮಾಣದಲ್ಲೂ  ತಾವು  ತೊಡಗಿಸಿಕೊಳ್ಳುವುದಾಗಿ  ಹೇಳಿದ ಅವರು,  ನಾವು  ನಿಜವಾದ ಹಿಂದುವಾದಿಗಳು, ಬಿಜೆಪಿ ಹಿಂದುತ್ವವನ್ನು ತ್ಯಜಿಸಿ ಎಷ್ಟೋ ಸಮಯವಾಗಿದೆ ಎಂದು ಉದ್ಧವ್  ಹೇಳಿದರು.

ಇದೇ ವೇಳೆ ಶೀಘ್ರದಲ್ಲೇ ಅಯೋಧ್ಯೆಯಲ್ಲಿ ಭವ್ಯ ರಾಮ  ದೇವಾಲಯ  ನಿರ್ಮಾಣಗೊಳ್ಳಲಿದ್ದು. ಮಂದಿರ  ನಿರ್ಮಾಣದಲ್ಲಿ ಪಾಲ್ಗೊಳ್ಳುವ ರಾಮ ಭಕ್ತರಿಗೆ  ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರಿಗೆ ಕೋರಿದರು.

 ಈ ವೇಳೆ, 'ನಾನು ಬಿಜೆಪಿಯಿಂದ ಬೇರ್ಪಟ್ಟಿದ್ದೇನೆ ಹೊರತು ಹಿಂದುತ್ವದಿಂದ ಅಲ್ಲ. ಹಿಂದುತ್ವವೇ ಬೇರೆ ವಿಚಾರ. ಹಾಗಾಗಿ ನಾನು ಅದರಿಂದ ಬೇರ್ಪಟ್ಟಿಲ್ಲ. ಕೊನೆಯ ಬಾರಿಗೆ ನಾನು ಇಲ್ಲಿ ಬಂದಿದ್ದಾಗ, ರಾಮ ಮಂದಿರದ ವಿಚಾರವು ಗೊಂದಲದಲ್ಲಿತ್ತು. ನಾನು 2018ರ ನವೆಂಬರ್‌ನಲ್ಲಿ ನಾನಿಲ್ಲಿಗೆ ಬಂದಿದ್ದೆ. ಆದರೆ 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ನಾನು ಕೂಡ ಮುಖ್ಯಮಂತ್ರಿಯಾಗಿದ್ದೇನೆ. ಇದೀಗ ನಾನು ಮೂರನೇ ಬಾರಿಗೆ ಇಲ್ಲಿಗೆ ಬಂದಿದ್ದೇನೆ ಮತ್ತು ನಾನು ಇಲ್ಲಿಗೆ ಬಂದಾಗಲೆಲ್ಲಾ ನನಗೆ ಅದು ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂದು ತಿಳಿಸಿದರು. 

ಅಂತೆಯೇ 'ನಿನ್ನೆಯಷ್ಟೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದೆ. ನಾವು ದೇವಾಲಯವನ್ನು ಖಂಡಿತವಾಗಿಯೂ ನಿರ್ಮಿಸುತ್ತೇವೆ ಎಂದು ಹೇಳಿದ್ದೇನೆ ಮತ್ತು ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡಲು ಬರುವ ರಾಮನ ಭಕ್ತರಿಗೆ ಅಯೋಧ್ಯೆಯಲ್ಲಿ ಸ್ವಲ್ಪ ಜಾಗವನ್ನು ನೀಡುವಂತೆ ವಿನಂತಿಸುತ್ತೇನೆ ಎಂದರು.

ಇನ್ನು ಅಯೋಧ್ಯೆಯಲ್ಲಿ ಉದ್ಧವ್ ಠಾಕ್ರೆ ಅವರು ಆರತಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಅದನ್ನು ರದ್ದುಪಡಿಸಲಾಯಿತು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com