ಮೊದಲು ಮಾನವೀಯತೆ, ಬಳಿಕ ಆರ್ಥಿಕತೆ: ಪ್ರಧಾನಿ ಮೋದಿ ಮಾತಿಗೆ ತಲೆದೂಗಿದ ಜಿ20 ನಾಯಕರು

ಇಡೀ ವಿಶ್ವವೇ ಮಾರಕ ವೈರಸ್ ನಿಂದ ತತ್ತರಿಸುತ್ತಿದ್ದು, ಮೊದಲು ಮಾನವೀಯತೆಯ ಕುರಿತು ಚರ್ಚೆ ಮಾಡೋಣ ಬಳಿಕ ಆರ್ಥಿಕತೆ ಕುರಿತು ಚರ್ಚೆ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ನವದೆಹಲಿ: ಇಡೀ ವಿಶ್ವವೇ ಮಾರಕ ವೈರಸ್ ನಿಂದ ತತ್ತರಿಸುತ್ತಿದ್ದು, ಮೊದಲು ಮಾನವೀಯತೆಯ ಕುರಿತು ಚರ್ಚೆ ಮಾಡೋಣ ಬಳಿಕ ಆರ್ಥಿಕತೆ ಕುರಿತು ಚರ್ಚೆ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಾರಣಾಂತಿಕ ಕೊರೋನಾ ವೈರಸ್ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಪರಸ್ಪರ ಸಹಕಾರದೊಂದಿಗೆ ಹೋರಾಡುವ ಸಲುವಾಗಿ ತುರ್ತು ಜಿ20 ​ ಶೃಂಗಸಭೆ ನಡೆಯಿತು. ಕೋವಿಡ್-19 ವಿಷಯವಾಗಿ ನಡೆದ ತುರ್ತು ಜಿ20 ಸಮ್ಮೇಳನ ನಾಯಕರಿಗೆ ಮಾತ್ರ ಮುಕ್ತವಾಗಿ,  ಗೌಪ್ಯವಾಗಿ ನಡೆಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಜಿ20 ನಾಯಕರ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, ಮೊದಲು ಮನುಷ್ಯರ ಬಗ್ಗೆ ಯೋಚಿಸೋಣ, ಆರ್ಥಿಕತೆಯ ಬಗ್ಗೆ ಆಮೇಲೆ ಮಾತನಾಡೋಣ ಎಂದು ಹೇಳಿದರು. ಪ್ರಧಾನಿ ಮೋದಿ ಮಾತಿಗೆ ಜಿ20 ನಾಯಕರು  ಮೆಚ್ಚುಗೆ ಸೂಚಿಸಿದರು.

'ಈ ದುರಂತದಲ್ಲಿ ಸಾವಿರಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದರ ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳು ಅಷ್ಟೇ ಆತಂಕಕಾರಿ. ಅದು ಎಲ್ಲರಿಗೂ ಎಚ್ಚರಿಕೆಯ ಗಂಟೆ ಕೂಡ ಹೌದು. ಹೇಗಾದರೂ ನಾವು ನಮ್ಮ ತಕ್ಷಣದ ಆಘಾತವನ್ನು ಮೀರಿ, ಈ ಸಾಂಕ್ರಾಮಿಕ ರೋಗ  ಹರಡದಂತೆ ತಡೆಗಟ್ಟಬೇಕಿದೆ. ಜಿ 20 ಖಾತೆಯಲ್ಲಿ ಜಗತ್ತಿನ ಶೇ.80ರಷ್ಟು ಜಿಡಿಪಿ ಇದೆ ಮತ್ತು ಜಾಗತಿಕವಾಗಿ ಶೇ.60ರಷ್ಟು ಜನಸಂಖ್ಯೆ ಇದೆ. ಇದೇ ಸಮಯದಲ್ಲಿ ನಮ್ಮ ಬಳಿ ಜಾಗತಿಕವಾಗಿ ಶೇ.90ರಷ್ಟು ಕೋವಿಡ್-19 ಪ್ರಕರಣಗಳಿವೆ ಮತ್ತು ಇದರಿಂದ ಉಂಟಾದ ಮರಣ ಪ್ರಮಾಣ  ಶೇ.88ರಷ್ಟಿದೆ. ಮೊದಲು ಮಾನವೀಯತೆಯ ಕುರಿತು ಚರ್ಚೆ ಮಾಡೋಣ ಬಳಿಕ ಆರ್ಥಿಕತೆ ಕುರಿತು ಚರ್ಚೆ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಂತೆಯೇ ಜಿ20 ರಾಷ್ಟ್ರಗಳು ಕೋವಿಡ್ 19 ವೈರಸ್ ತಡೆಗಟ್ಟಲು ಪರಸ್ಪರ ಸಹಕಾರ ಅತ್ಯಗತ್ಯ ಎಂದು ಹೇಳಿದ ಪ್ರಧಾನಿ ಮೋದಿ, ಪ್ರಮುಖ ಕೃಷಿ ಉತ್ಪನ್ನಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಅಲ್ಲದೆ ಸಾಂಕ್ರಾಮಿಕ ರೋಗಗಳನ್ನು ನಿವಾರಿಸುವ  ನಿಟ್ಟಿನಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಸ್ಪರ ಹಂಚಿಕೊಳ್ಳಬೇಕು ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ ಅವರ ಮಾತಿಗೆ ಜಿ20 ನಾಯಕರು ಮೆಚ್ಚುಗೆ ಸೂಚಿಸಿದರು. ಅಲ್ಲದೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿ20 ಸಭೆ ಯಾವುದೇ ರೀತಿಯ ಆರ್ಥಿಕತೆ ಅಥವಾ ವಿತ್ತೀಯ ವಿಚಾರದ ಕುರಿತು ಚರ್ಚಿಸದೇ ಮುಕ್ತಾಯವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com