ಮೇ 1ರಿಂದ ಶ್ರಮಿಕ್ ವಿಶೇಷ ರೈಲುಗಳಲ್ಲಿ 30 ಮಕ್ಕಳ ಜನನ!

ವಲಸಿಗ ಕಾರ್ಮಿಕರನ್ನು ತವರು ರಾಜ್ಯಗಳಿಗೆ  ಕರೆದೊಯ್ಯುವ ಶ್ರಮಿಕ್ ವಿಶೇಷ ರೈಲುಗಳು ಸಂಚಾರ ಆರಂಭಿಸಿದ ಮೇ 1ರಿಂದಲೂ 30 ಮಕ್ಕಳು ರೈಲಿನಲ್ಲಿ ಜನಿಸಿದ್ದಾರೆ.
ಶ್ರಮಿಕ್ ವಿಶೇಷ ರೈಲುಗಳು
ಶ್ರಮಿಕ್ ವಿಶೇಷ ರೈಲುಗಳು

ನವದೆಹಲಿ: ವಲಸಿಗ ಕಾರ್ಮಿಕರನ್ನು ತವರು ರಾಜ್ಯಗಳಿಗೆ  ಕರೆದೊಯ್ಯುವ ಶ್ರಮಿಕ್ ವಿಶೇಷ ರೈಲುಗಳು ಸಂಚಾರ ಆರಂಭಿಸಿದ ಮೇ 1ರಿಂದಲೂ 30 ಮಕ್ಕಳು ರೈಲಿನಲ್ಲಿ ಜನಿಸಿದ್ದಾರೆ.

ಕೊರೋನಾವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮೂರಿಗೆ ತೆರಳಲು ವಲಸೆ ಕಾರ್ಮಿಕರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಿದ್ದರೂ ಮಕ್ಕಳ ಜನನದಿಂದಾಗಿ ಆನಂದಪಟ್ಟಿದ್ದಾರೆ.

ತಮ್ಮೂರಿಗೆ ತೆರಳಲು ಕಳೆದ ಎರಡು ತಿಂಗಳಿಂದಲೂ ಸರಿಯಾದ ಊಟ, ನೀರು ಇಲ್ಲದೆ ಸಂಕಷ್ಟ ಅನುಭವಿಸಿದ್ದ 23 ವರ್ಷದ ಸಂಗೀತಾ ಅಥವಾ 27 ವರ್ಷದ ಮಧು ಸುರಕ್ಷಿತವಾಗಿ ರೈಲಿನಲ್ಲಿಯೇ  ತಮ್ಮ ಮಕ್ಕಳಿಗೆ ಜನ್ಮ ನೀಡಿದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಕಳೆದ ಸೋಮವಾರ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಸಂಚರಿಸುತ್ತಿದ್ದ 9 ತಿಂಗಳ ಗರ್ಭಿಣಿ ಸಂಗೀತಾ, ಇತರ ಸಹ ಪ್ರಯಾಣಿಕರ ಸಹಕಾರದೊಂದಿಗೆ ಆರೋಗ್ಯಪೂರ್ಣ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.

ಶುಕ್ರವಾರ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ 27 ವರ್ಷದ ಗರ್ಭಿಣಿ ಮಧು ಕುಮಾರಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಆ ಪೋಟೋವನ್ನು ಬೆಂಗಳೂರು ಪೊಲೀಸರು ಶೇರ್ ಮಾಡಿದ್ದಾರೆ. 

ನಮ್ಮ ಸಿಬ್ಬಂದಿಗಳು ಸರಿಯಾದ ಸಮಯದಲ್ಲಿ  ಅಗತ್ಯತೆಗಳನ್ನು ಪೂರೈಸಿದ್ದಾರೆ. ಶ್ರಮಿಕ್ ವಿಶೇಷ ರೈಲುಗಳಲ್ಲಿ ಜನಿಸಿದ ಎಲ್ಲಾ ಮಕ್ಕಳು ಹಾಗೂ ತಾಯಂದಿರು ಆರೋಗ್ಯದಿಂದ ಇದ್ದಾರೆ ಎಂದು ರೈಲ್ವೆ ವಕ್ತಾರ ಆರ್ ಡಿ ಬಾಜ್ಪೈ ತಿಳಿಸಿದ್ದಾರೆ. 

ಮೇ 8ರಂದು ಗುಜರಾತಿನಿಂದ ಬಿಹಾರಕ್ಕೆ ತೆರಳುತ್ತಿದ್ದ ಮಮತಾ ಯಾದವ್  ಹೆಣ್ಣು ಮಗುವಿಗೆ ಜನ್ಮ ನೀಡಿದರೆ, ಮೇ 13 ರಂದು ಅಹಮದಾಬಾದ್- ಫೈಜಾಬಾದ್ ಶ್ರಮಿಕ್ ವಿಶೇಷ ರೈಲಿನಲ್ಲಿ ಸಂಚರಿಸುತ್ತಿದ್ದ ಪಿಂಕಿ ಯಾದವ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕಳೆದ ಭಾನುವಾರ ಹಬೀಬ್‌ಗಂಜ್-ಬಿಲಾಸ್ಪುರ್ ರೈಲಿನಲ್ಲಿ ಸಂಚರಿಸುತ್ತಿದ್ದ 23 ವರ್ಷದ ಈಶ್ವರಿ ದೇವಿ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

2800 ಶ್ರಮಿಕ್ ವಿಶೇಷ ರೈಲುಗಳು ದೇಶಾದ್ಯಂತ ಸಂಚರಿಸುತ್ತಿದ್ದು, ರೈಲಿನಲ್ಲಿ ಮಕ್ಕಳ ಜನನ ಪೋಷಕರಿಗೆ ಮಾತ್ರವಲ್ಲ ಸಹ ಪ್ರಯಾಣಿಕರಿಗೂ ಆನಂದವನ್ನುಂಟುಮಾಡಿದೆ. ಭಾನುವಾರ ಉತ್ತರ ಪ್ರದೇಶಕ್ಕೆ ಸಂಚರಿಸುತ್ತಿದ್ದ  ವಿಶೇಷ ರೈಲಿನಲ್ಲಿ ಜನಿಸಿದ  ಹೆಣ್ಣು ಮಗುವಿಗೆ 'ಲಾಕ್‌ಡೌನ್ ಯಾದವ್' ಎಂದು ಹೆಸರಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com