ಫಲ ಕೊಡಲಿಲ್ಲ ಹೊರತೆಗೆಯುವ ಪ್ರಯತ್ನ: ತೆಲಂಗಾಣದಲ್ಲಿ ಕೊಳವೆ ಬಾವಿಗೆ ಬಿದ್ದ 3 ವರ್ಷದ ಮಗು ಸಾವು

ಪಾಳುಬಿದ್ದ ಕೊಳವೆ ಬಾವಿಗೆ ಪುಟ್ಟ ಮಕ್ಕಳು ಬಿದ್ದು ಸಾಯುವ ಪ್ರಕರಣ ಕೊನೆಯಾಗುತ್ತಲೇ ಇಲ್ಲ. ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಕಾಲು ಜಾರಿ 120 ಅಡಿ ಆಳದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದು ಇಂದು ಬೆಳಗ್ಗೆ ಮೃತದೇಹವನ್ನು ಹೊರತೆಗೆಯಲಾಗಿದೆ.
3 ವರ್ಷದ ಮಗು ಸಾಯಿ ವರ್ಧನ್
3 ವರ್ಷದ ಮಗು ಸಾಯಿ ವರ್ಧನ್

ಮೆಡಕ್(ತೆಲಂಗಾಣ): ಪಾಳುಬಿದ್ದ ಕೊಳವೆ ಬಾವಿಗೆ ಪುಟ್ಟ ಮಕ್ಕಳು ಬಿದ್ದು ಸಾಯುವ ಪ್ರಕರಣ ಕೊನೆಯಾಗುತ್ತಲೇ ಇಲ್ಲ. ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಕಾಲು ಜಾರಿ 120 ಅಡಿ ಆಳದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದು ಉಸಿರುಗಟ್ಟಿ ಇಂದು ನಸುಕಿನ ಜಾವ ಮೃತದೇಹ ಹೊರತೆಗೆಯಲಾಗಿದೆ.

ಮಗುವಿನ ಮೃತದೇಹ 20ರಿಂದ 25 ಅಡಿ ಆಳದಲ್ಲಿ ಸಿಲುಕಿತ್ತು. ಹೈದರಾಬಾದ್ ಮತ್ತು ಗುಂಟೂರಿನಿಂದ ಬಂದಿದ್ದ ಎನ್ ಡಿಆರ್ ಎಫ್ ತಂಡದ 25ಕ್ಕೂ ಹೆಚ್ಚು ಸಿಬ್ಬಂದಿ ಸತತ 12 ಗಂಟೆ ಕಾರ್ಯಾಚರಣೆ ನಂತರ ಮೃತದೇಹ ಹೊರತೆಗೆದಿದೆ. ಗದ್ದೆಯಲ್ಲಿ ಬೋರ್ ವೆಲ್ ಕೊರೆಸಿ ಅದನ್ನು ಮುಚ್ಚದೆ ಹಾಗೆ ಬಿಟ್ಟಿದ್ದ ಬಾಲಕನ ತಾತ ಮಂಗಲಿ ಭಿಕ್ಷಾಪತಿ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಮೆಡಕ್ ಜಿಲ್ಲಾಧಿಕಾರಿ ಕೆ ಧರ್ಮ ರೆಡ್ಡಿ ತಿಳಿಸಿದ್ದಾರೆ.

ನಡೆದಿದ್ದೇನು: ಗದ್ದೆಯಲ್ಲಿ ಇತ್ತೀಚೆಗೆ ಮಂಗಲಿ ಭಿಕ್ಷಾಪತಿ ಕೊಳವೆ ಬಾವಿಗಳನ್ನು ಕೊರೆಸಿದ್ದರು. ನೀರು ಸಿಗದಿದ್ದಾಗ ನಿನ್ನೆ ಮತ್ತೊಂದು ಕೊಳವೆಬಾವಿ ಕೊರೆಸಿದ್ದು ಅದರಲ್ಲಿಯೂ ನೀರು ಸಿಗಲಿಲ್ಲ. ಹತಾಶೆಯಿಂದ ಅದನ್ನು ಮುಚ್ಚದೆ ನಿರ್ಲಕ್ಷ್ಯವಹಿಸಿ ಹಾಗೆಯೇ ಬಿಟ್ಟುಬಿಟ್ಟರು.  ಗದ್ದೆ ಪಕ್ಕದ ಮನೆಯಲ್ಲಿ ಸಾಯಿ ವರ್ಧನ್ ತಂದೆ ಗೋವರ್ಧನ್ ಮತ್ತು ತಾಯಿ ನವೀನಾ ಮತ್ತಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ನಿನ್ನೆ ಸಾಯಂಕಾಲ 5 ಗಂಟೆ ಹೊತ್ತಿಗೆ ದಂಪತಿ ಮಗುವಿನೊಂದಿಗೆ ಹೊರಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ ಮಗು ಜಾರಿ ತೆರೆದ ಕೊಳವೆ ಬಾವಿಗೆ ಬಿದ್ದಿದೆ. ಕೂಡಲೇ ತಾಯಿ ನವೀನ ತಾನು ಉಟ್ಟಿದ್ದ ಸೀರೆಯನ್ನು ಕಳಚಿ ಕೊಳವೆ ಬಾವಿಯೊಳಗೆ ಇಳಿಸಿ ಮಗು ಅದನ್ನು ಹಿಡಿದುಕೊಂಡು ಮೇಲೆ ಬರಬಹುದು ಎಂದು ಪ್ರಯತ್ನಪಟ್ಟಳು. ಮಗು ಆಗಲೇ ಬಾವಿಯೊಳಗೆ ಬಹಳ ಆಳದವರೆಗೆ ಹೋಗಿದ್ದು ಸೀರೆಯನ್ನು ಹಿಡಿದು ಎಳೆಯಲು ಸಾಧ್ಯವಾಗಲಿಲ್ಲ.

ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ವಿಷಯ ತಲುಪಿಸಿದರು. ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ, ಜಿಲ್ಲಾಡಳಿತ ಬಂದು ಪಕ್ಕದಲ್ಲಿ ಮಣ್ಣನ್ನು ಅಗೆದು ಕೊಳವೆ ಬಾವಿಯಿಂದ ಮಗುವನ್ನು ಸುರಕ್ಷಿತವಾಗಿ ತೆಗೆಯಲು ರಾತ್ರಿಯಿಡೀ ಪ್ರಯತ್ನಪಟ್ಟಿತ್ತು. ಆದರೆ ಆಮ್ಲಜನಕ ಸರಿಯಾಗಿ ಸಿಗದೆ ಮಗು ಮೃತಪಟ್ಟಿದ್ದು ಕೊನೆಗೆ ಶವವಾಗಿ ಮಗುವನ್ನು ಹೊರತೆಗೆಯಬೇಕಾಗಿ ಬಂತು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿ ಮೃತಪಟ್ಟಿದ್ದನ್ನು ಖಚಿತಪಡಿಸಿ ವಿಧಾನಗಳನ್ನು ಪೂರೈಸಲಾಗಿದೆ. ಗದ್ದೆಯಲ್ಲಿ ಅನುಮತಿ ಪಡೆಯದೆ ಮೂರು ಕೊಳವೆಬಾವಿಗಳನ್ನು ಕೊರೆದು ನೀರು ಸಿಗದೆ ಹಾಗೆಯೇ ಬಿಡಲಾಗಿದ್ದು ಕಂಡುಬಂದಿದ್ದು, ಅಕ್ರಮವಾಗಿ ಕೊಳವೆ ಬಾವಿ ತೆಗೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com