ಮೋದಿ 2.0 ಸರ್ಕಾರಕ್ಕೆ 1 ವರ್ಷ: ದೇಶವಾಸಿಗಳನ್ನು ಉದ್ದೇಶಿಸಿ ಬಹಿರಂಗ ಪತ್ರ, ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂದ ಪ್ರಧಾನಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಶನಿವಾರಕ್ಕೆ ಒಂದು ವರ್ಷವಾಗಿದೆ. ಕೊರೋನಾ ಬಿಕ್ಕಟ್ಟು ಸಂದರ್ಭದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಮೋದಿ ಪತ್ರ ಬರೆದಿದ್ದಾರೆ.

Published: 30th May 2020 09:59 AM  |   Last Updated: 30th May 2020 01:11 PM   |  A+A-


PM Narendra Modi

ಪ್ರಧಾನಿ ನರೇಂದ್ರ ಮೋದಿ

Posted By : Sumana Upadhyaya
Source : PTI

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಶನಿವಾರಕ್ಕೆ ಒಂದು ವರ್ಷವಾಗಿದೆ. ಕೊರೋನಾ ಬಿಕ್ಕಟ್ಟು ಸಂದರ್ಭದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಮೋದಿ ಪತ್ರ ಬರೆದಿದ್ದಾರೆ.

ಸುದೀರ್ಘವಾಗಿ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು, ದೇಶದ ಜನರ ಆರ್ಥಿಕ ಸ್ಥಿತಿಗತಿ, ಸಣ್ಣ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಸರ್ಕಾರ ಈ ಸಂದರ್ಭದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.

ಪತ್ರದಲ್ಲಿ ತಮ್ಮ ಸರ್ಕಾರ ಕೈಗೊಂಡ ಹಲವು ಪ್ರಮುಖ ನಿರ್ಧಾರಗಳು, ಆದೇಶಗಳು, ಸಂಸತ್ತಿನಲ್ಲಿ ಅನುಮೋದನೆಯಾದ ಕಾಯ್ದೆಗಳನ್ನು ಕೂಡ ಪ್ರಸ್ತಾಪಿಸಿದ್ದಾರೆ.

ಪತ್ರದಲ್ಲಿ ಏನಿದೆ: ಕಳೆದ ವರ್ಷ ಈ ದಿನ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಆರಂಭವಾಯಿತು. ಹಲವು ದಶಕಗಳ ನಂತರ ಭಾರತ ದೇಶದ ಜನರು ಸಂಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತಂದರು.

ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಕಾಪಾಡಲು ಜನರು ನಮಗೆ ಬೆಂಬಲ ನೀಡಿದ್ದಕ್ಕೆ ಈ ಸಂದರ್ಭದಲ್ಲಿ 130 ಕೋಟಿ ಭಾರತೀಯರಿಗೆ ಆಭಾರಿ. ಸಾಮಾನ್ಯ ದಿನಗಳಲ್ಲಾದರೆ ಇಂದು ನಾನು ನಿಮ್ಮ ಮಧ್ಯೆ ಇದ್ದು ಸಂಭ್ರಮಾಚರಣೆ ಮಾಡುತ್ತಿದ್ದೆ. ಆದರೆ ಇಂದು ಕೊರೋನಾದಿಂದಾಗಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಹೀಗಾಗಿ ನಿಮ್ಮೆಲ್ಲರನ್ನು ಉದ್ದೇಶಿಸಿ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಪ್ರೀತಿ, ಹಾರೈಕೆ, ಸಹಕಾರ ನಮಗೆ ಹೊಸ ಶಕ್ತಿ, ಉತ್ಸಾಹ ನೀಡುತ್ತದೆ. ಪ್ರಜಾಪ್ರಭುತ್ವದ ಒಟ್ಟು ಶಕ್ತಿಯನ್ನು ನೀವು ತೋರಿಸುತ್ತಿರುವುದು ಇಡೀ ಜಗತ್ತಿಗೆ ಹೊಸ ಬೆಳಕಾಗಿದೆ.

2014ರಲ್ಲಿ ಈ ದೇಶದ ಜನರು ಮಹತ್ವದ ರೂಪಾಂತರಕ್ಕೆ ಬಯಸಿ ನಮಗೆ ಮತ ಹಾಕಿದರು. ಕಳೆದ ಐದು ವರ್ಷಗಳಲ್ಲಿ, ಆಡಳಿತ ಯಂತ್ರವು ಭ್ರಷ್ಟಾಚಾರದ ಜೌಗು ಮತ್ತು ದುರಾಡಳಿತವನ್ನು ಹೇಗೆ ಮುರಿಯಿತು ಎಂಬುದನ್ನು ರಾಷ್ಟ್ರ ನೋಡಿದೆ.ಅಂತ್ಯೋದಯ ಎಂಬ ಸ್ಪೂರ್ತಿಗೆ ಸರಿಯಾಗಿ ಲಕ್ಷಾಂತರ ಮಂದಿಯ ಬದುಕು ರೂಪಾಂತರಗೊಂಡಿದೆ.

2014ರಿಂದ 2019ರವರೆಗೆ ಭಾರತದ ನಿಲುವು ಗಮನಾರ್ಹವಾಗಿ ಏರಿಕೆಯಾಯಿತು. ಬಡವರ ಪರಿಸ್ಥಿತಿ ವಿಸ್ತರಿಸಲ್ಪಟ್ಟಿತು. ಹಣಕಾಸಿನ ಒಳಗೊಳ್ಳುವಿಕೆ, ಉಚಿತ ಅನಿಲ ಮತ್ತು ವಿದ್ಯುತ್ ಸಂಪರ್ಕ, ಸಂಪೂರ್ಣ ಶುಚಿತ್ವ, ಎಲ್ಲರಿಗೂ ಸೂರು ವಿಷಯಗಳಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ.

ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು.ಅದೇ ಹೊತ್ತಿಗೆ ದಶಕಗಳ ಕಾಲದ ಬೇಡಿಕೆಯಾದ ಒಆರ್ ಒಪಿ, ಒಂದು ರಾಷ್ಟ್ರ ಒಂದು ತೆರಿಗೆ-ಜಿಎಸ್ಟಿ, ರೈತರಿಗೆ ಉತ್ತಮ ಎಂಎಸ್ಪಿಗಳನ್ನು ಈಡೇರಿಸಲಾಗಿದೆ.

ಇದೆಲ್ಲದರ ಫಲ 2019ರಲ್ಲಿ ದೇಶದ ಜನ ಮತ್ತೆ ಎನ್ ಡಿಎ ಮೈತ್ರಿಕೂಟ ಪರ ಮತ ಹಾಕಿದರು. ಅದು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಶಾಲಿಯನ್ನಾಗಿ ಮಾಡಲು ಜನರು ತೋರಿಸಿದ ಕನಸು. ಇಂದು, 130 ಕೋಟಿ ಜನರು ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಭಾಗಿಯಾಗಿದ್ದಾರೆ ಮತ್ತು ಸಂಯೋಜಿತರಾಗಿದ್ದಾರೆ. ‘ಜನ ಶಕ್ತಿ’ ಮತ್ತು ‘ರಾಷ್ಟ್ರ ಶಕ್ತಿ’ ಬೆಳಕು ಇಡೀ ರಾಷ್ಟ್ರವನ್ನು ಬೆಳಗಿಸಿದೆ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂಬ ಮಂತ್ರದಿಂದ ನಡೆಸಲ್ಪಡುವ ಭಾರತವು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಸಾಗುತ್ತಿದೆ.

ಕಳೆದ ಒಂದು ವರ್ಷದಲ್ಲಿ ಮಾಡಿದ್ದೇನು?: 370 ನೇ ವಿಧಿ ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವವನ್ನು ಹೆಚ್ಚಿಸಿದೆ. ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ನೀಡಿದ ರಾಮ ಮಂದಿರ ತೀರ್ಪು ಶತಮಾನಗಳಿಂದಲೂ ನಡೆಯುತ್ತಿರುವ ಚರ್ಚೆಗೆ ಸೌಹಾರ್ದಯುತವಾದ ಅಂತ್ಯವನ್ನು ತಂದಿತು. ತ್ರಿವಳಿ ತಲಾಖ್ ಎಂಬ ಶತಮಾನಗಳ ಅನಾಗರಿಕ ಸಂಪ್ರದಾಯ ಇನ್ನು ಇತಿಹಾಸ.

ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವುದು ಭಾರತದ ಸಹಾನುಭೂತಿ ಮತ್ತು ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿತ್ತು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಹುದ್ದೆಯ ರಚನೆಯು ದೀರ್ಘಕಾಲದಿಂದ ಬಾಕಿ ಉಳಿದಿರುವ ಸುಧಾರಣೆಯಾಗಿದ್ದು ಅದು ಸಶಸ್ತ್ರ ಪಡೆಗಳ ನಡುವೆ ಸಮನ್ವಯವನ್ನು ಸುಧಾರಿಸಿದೆ. ಭಾರತವು ಮಿಷನ್ ಗಗನ ಯಾನಕ್ಕೆ ಸಿದ್ಧತೆ ಮಾಡಿಕೊಂಡಿದೆ.

ಬಡವರು, ರೈತರು, ಮಹಿಳೆಯರು ಮತ್ತು ಯುವಕರನ್ನು ಸಶಕ್ತಗೊಳಿಸುವುದು ನಮ್ಮ ಆದ್ಯತೆಯಾಗಿ ಉಳಿದಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಈಗ ಎಲ್ಲ ರೈತರನ್ನು ಒಳಗೊಂಡಿದೆ. ಕೇವಲ ಒಂದು ವರ್ಷದಲ್ಲಿ 72 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು 9 ಕೋಟಿ 50 ಲಕ್ಷ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ.

ಹೀಗೆ ಹತ್ತು ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕೊನೆಗೆ 130 ಕೋಟಿ ಭಾರತೀಯರ ವರ್ತಮಾನ ಮತ್ತು ಭವಿಷ್ಯವನ್ನು ನಿರ್ಧರಿಸುವ ಸಮಯವಿದು. ಕೊರೋನಾ ಬಿಕ್ಕಟ್ಟು ಸಮಯದಲ್ಲಿ ಆತಂಕಪಡಬಾರದು. ನಾವು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಗೆಲುವು ನಮ್ಮದಾಗಲಿದೆ.

ನಮ್ಮ ದೇಶದ ಯಶಸ್ಸಿನ ಪ್ರಾರ್ಥನೆಯೊಂದಿಗೆ, ನಾನು ಮತ್ತೊಮ್ಮೆ ನಿಮಗೆ ನಮಸ್ಕರಿಸುತ್ತೇನೆ. ಆರೋಗ್ಯವಾಗಿರಿ, ಸುರಕ್ಷಿತವಾಗಿರಿ, ನಿಮಗೂ ನಿಮ್ಮ ಕುಟುಂಬಕ್ಕೂ ಮತ್ತೊಮ್ಮೆ ಶುಭಕಾಮನೆಗಳು, ಇಂತಿ ನಿಮ್ಮ ಪ್ರಧಾನ ಸೇವಕ ಎಂದು ಪತ್ರಕ್ಕೆ ಕೊನೆ ಹಾಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp