ಮಾಲೀಕತ್ವ ವಿವಾದ: ಪೊಲೀಸ್ ಠಾಣೆಗೆ ಬಂದ ಹಸು, ನಿಜವಾದ ಮಾಲೀಕರ ಕಂಡು ಹಿಡಿಯಲು ಪೊಲೀಸರ ಹರಸಾಹಸ

ಒಂದು ಹಸುವಿಗಾಗಿ ಇಬ್ಬರು ಮಾಲೀಕರು ಜಗಳ ಮಾಡಿಕೊಂಡ ಪರಿಣಾಮ ಹಸು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಗೋವುಗಳು
ಗೋವುಗಳು

ಕೊರಾಪುಟ್: ಒಂದು ಹಸುವಿಗಾಗಿ ಇಬ್ಬರು ಮಾಲೀಕರು ಜಗಳ ಮಾಡಿಕೊಂಡ ಪರಿಣಾಮ ಹಸು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಕೊರಾಪುಟ್ ನ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 1ರಂದು ದಾಖಲಾದ ದೂರಿನ ಅನ್ವಯ ಹಸುವಿನ ಮಾಲೀಕರ ಕಂಡು ಹಿಡಿಯಲು ಹಸುವನ್ನೇ ಠಾಣೆಗೆ ಕರೆಸಿದ್ದಾರೆ. ಕಮಲಾ ಮುದುಲಿ ಎಂಬ ಮಹಿಳೆ ತಮ್ಮ ನಾಗಮಣಿ ಎಂಬ ಹಸುವನ್ನು ಪ್ರಮೋದ್ ರೌತ್ ಎಂಬಾತ ತನ್ನ ಕೊಟ್ಟಿಗೆಯಲ್ಲಿ ಬಲವಂತವಾಗಿ ಕಟ್ಟಿಹಾಕಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಮೋದ್ ರೌತ್ ರನ್ನು ಕರೆಸಿಕೊಂಡಿದ್ದ ಪೊಲೀಸರು ಆತನ ಹೇಳಿಕೆ ಪಡೆದಿದ್ದರು. ಈ ವೇಳೆ ಪ್ರಮೋದ್ ತಾನು ಆ ಹಸುವನ್ನು ನಬರಂಗ್ ಪುರ್ ನಿಂದ ಖರೀದಿ ಮಾಡಿ ತಂದಿದ್ದಾಗಿ ಹೇಳಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ದೂರುದಾರೆ ಕಮಲಾ, ಅದು ನನ್ನ ಹಸು.. ನಾನು ಅದಕ್ಕೆ ನಾಗಮಣಿ ಎಂದು ಹೆಸರಿಟ್ಟಿದ್ದೇನೆ. ಆ ಹೆಸರಿನಿಂದ ಕೂಗಿದರೆ ಅದು ಪ್ರತಿಕ್ರಿಯೆ ನೀಡುತ್ತದೆ ಎಂದು ಹೇಳಿದರು. 

ಇದಕ್ಕೆ ಪ್ರತಿಯಾಗಿ ತಾನೂ ಕೂಡ ಹಸುವಿಗೆ ಲಕ್ಷ್ಮಿ ಎಂದು ಹೆಸರಿಟ್ಟಿದ್ದು, ಆ ಹೆಸರು ಕೂಗಿದರೆ ಹಸು ತಿರುಗಿ ನೋಡುತ್ತದೆ ಎಂದು ಪ್ರಮೋದ್ ಕೂಡ ಹೇಳಿದ್ದರು. ಇಬ್ಬರ ಹೇಳಿಕೆ ಪಡೆದ ಪೊಲೀಸರು ಸತ್ಯಾಸತ್ಯತೆ ತಿಳಿಯಲು ಹಸುವನ್ನು ಠಾಣೆಗೆ ಕರೆತರುವಂತೆ ಸೂಚಿಸಿದ್ದರು. ಹಸು ಠಾಣೆಗೆ ಬಂದ ಬಳಿಕ ಇಬ್ಬರಿಂದಲೂ ಹಸುವಿನ ಹೆಸರು ಕೂಗಿಸಿ ಆಗ ಹಸು ಯಾರ ಮಾತಿಗೆ ಪ್ರತಿಕ್ರಿಯೆ ನೀಡುತ್ತದೆಯೋ ಅವರೇ ಹಸುವಿನ ನಿಜವಾದ ಮಾಲಿಕರು ಎಂದು ತೀರ್ಮಾನಿಸುವ ಕುರಿತು ಪೊಲೀಸರು ನಿರ್ಧರಿಸಿದ್ದರು. ಬಳಿಕ ಪ್ರಮೋದ್ ಹಸುವನ್ನು ಕರೆತಂದಿದ್ದ. ಆದರೆ ಹಸು ಠಾಣೆಗೆ ಬಂದ ಬಳಿಕ ಪೊಲೀಸರಿಗೆ ಹೊಸ ತಲೆನೋವು  ಆರಂಭವಾಗಿತ್ತು. ಹಸು ಇಬ್ಬರ ಮಾತಿಗೂ ಪ್ರತಿಕ್ರಿಯೆ ನೀಡುತ್ತಿತ್ತು. ಇದರಿಂದ ಗೊಂದಲಕ್ಕೀಡಾದ ಪೊಲೀಸರು ಹಸುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕರೆಸಿ ಮಾಹಿತಿ ಪಡೆದಾಗ ಹಸು ಇಬ್ಬರ ಬಳಿಯೂ ಪಳಗಿದ್ದರಿಂದ ಅದು ಇಬ್ಬರಿಗೂ ಪ್ರತಿಕ್ರಿಯೆ ನೀಡುತ್ತಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಹಸವನ್ನು ಬೇರೆ ಕೊಟ್ಟಿಗೆಯಲ್ಲಿ ಬಿಟ್ಟಿರುವ ಪೊಲೀಸರು ನಿಜವಾದ ಮಾಲಿಕರು ಯಾರು ಎಂದು ತಿಳಿಯುವವರೆಗೂ ಹಸು ಇಲ್ಲೇ ಇರಲಿದೆ ಎಂದು ಹೇಳಿದ್ದಾರೆ. ಅಂತೆಯೇ ಒಂದು ಹಸುವಿನ ಸಂಬಂಧ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದೀಗ ಈ ಹಸು ಯಾರ ಸುಪರ್ಧಿಗೆ ಹೊಗಲಿದೆ ಎಂಬುದನ್ನು ಇಡೀ ಗ್ರಾಮದವರು ಅಚ್ಚರಿಯಿಂದ ನೋಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com