ಭಾರತ ತನ್ನ ಶಕ್ತಿಯನ್ನು ತೋರಿಸಿದ್ದು, ನಮ್ಮನ್ನು ಪರೀಕ್ಷಿಸಿದರೆ ಸಿಗುವ ಉತ್ತರ ತೀವ್ರವಾಗಿರುತ್ತದೆ: ಪ್ರಧಾನಿ ಮೋದಿ

ಭಾರತ ಈಗಾಗಲೇ ತನ್ನ ಶಕ್ತಿಯನ್ನು ತೋರಿಸಿದ್ದು, ನಮ್ಮನ್ನು ಪರೀಕ್ಷೆ ಮಾಡಿದ್ದೇ ಆದರೆ, ಅದಕ್ಕೆ ಸಿಗುವ ಉತ್ತರ ತೀವ್ರವಾಗಿರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 
ರಾಜಸ್ಥಾನದ ಜೈಸಾಲ್ಮೇರ್'ನ ಲೋಂಗೆವಾಲಗೆ ತೆರಳಿದ ಪ್ರಧಾನಿ ಮೋದಿ
ರಾಜಸ್ಥಾನದ ಜೈಸಾಲ್ಮೇರ್'ನ ಲೋಂಗೆವಾಲಗೆ ತೆರಳಿದ ಪ್ರಧಾನಿ ಮೋದಿ

ನವದೆಹಲಿ: ನೀವು ಹಿಮದಿಂದ ಆವೃತವಾದ ಪರ್ವತಗಳಲ್ಲಿ ಅಥವಾ ಮರುಭೂಮಿಗಳಲ್ಲಿರಬಹುದು, ನಾನು ನಿಮ್ಮೊಂದಿಗಿದ್ದಾಗ ಮಾತ್ರ ನನ್ನ ದೀಪಾವಳಿ ಹಬ್ಬ ಸಂಪೂರ್ಣಗೊಳ್ಳುತ್ತದೆ. ನಿಮ್ಮ ಮುಖದಲ್ಲಿನ ಸಂತೋಷವನ್ನು ನೋಡಿದಾಗ ನನ್ನ ಸಂತೋಷ ದ್ವಿಗುಣಗೊಳ್ಳುತ್ತದೆ ಎಂದು ಭಾರತೀಯ ಯೋಧರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. 

ಪ್ರತೀವರ್ಷದಂತೆ ಈ ಬಾರಿ ಕೂಡ ಬೆಳಕಿನ ಹಬ್ಬ ದೀಪಾವಳಿಯನ್ನು ಭಾರತೀಯ ಯೋಧರೊಂದಿಗೆ ಆಚರಿಸುವ ಸಲುವಾಗಿ ರಾಜಸ್ಥಾನದ ಜೈಸಾಲ್ಮೇರ್'ನ ಲೋಂಗೆವಾಲಗೆ ತೆರಳಿರುವ ಮೋದಿಯವರು, ಯೋಧರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. 

ನೀವು ಹಿಮದಿಂದ ಆವೃತವಾದ ಪರ್ವತಗಳಲ್ಲಿ ಅಥವಾ ಮರುಭೂಮಿಗಳಲ್ಲಿರಬಹುದು, ನಾನು ನಿಮ್ಮೊಂದಿಗಿದ್ದಾಗ ಮಾತ್ರ ನನ್ನ ದೀಪಾವಳಿ ಹಬ್ಬ ಸಂಪೂರ್ಣಗೊಳ್ಳುತ್ತದೆ. ನಿಮ್ಮ ಮುಖದಲ್ಲಿನ ಸಂತೋಷವನ್ನು ನೋಡಿದಾಗ ನನ್ನ ಸಂತೋಷ ದ್ವಿಗುಣಗೊಳ್ಳುತ್ತದೆ. ನಿಮ್ಮೆಲ್ಲಿರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಪ್ರತಿಯೊಬ್ಬ ಭಾರತೀಯನ ಶುಭಾಶಯಗಳನ್ನು ನಿಮಗಾಗಿ ನಾನಿಂದು ತಂದಿದ್ದೇನೆ.

ಹಿಮಾಲಯದ ಶಿಖರಗಳು, ಮರುಭೂಮಿ, ದಟ್ಟ ಕಾಡುಗಳು ಅಥವಾ ಸಮುದ್ರಗಳ ಆಳವಾಗಿರಲಿ ಪ್ರತೀ ಸವಾಲಿನಲ್ಲೂ ನಿಮ್ಮ ಶೌರ್ಯವು ವಿಜಯ ಸಾಧಿಸಿದೆ. 1971 ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧವು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಡುವಿನ ಸಮನ್ವಯತೆಗೆ ಉದಾಹರಣೆಯಾಗಿದೆ. ಸೈನಿಕರ ಕುರಿತ ಇತಿಹಾಸವನ್ನು ಓದಿದಾಗಲೆಲ್ಲಾ ಲಾಂಗ್‌ವಾಲಾ ಕದನ ನೆನಪಿಸಿಕೊಳ್ಳಲಾಗುತ್ತದೆ. 

ಇಂದು 130 ಕೋಟಿ ಭಾರತೀಯರು ನಿಮ್ಮೊಂದಿಗೆ ನಿಂತಿದ್ದಾರೆ. ನಮ್ಮ ಯೋಧರ ಶೌರ್ಯ, ತ್ಯಾಗದ ಕುರಿತು ಪ್ರತೀಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಿದ್ದಾನೆ. ನಿಮ್ಮ ಅಜೇಯತೆಯ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ವಿಶ್ವದ ಯಾವುದೇ ಶಕ್ತಿಯು ನಮ್ಮ ವೀರ ಯೋಧರನ್ನು ನಮ್ಮ ದೇಶದ ಗಡಿಗಳನ್ನು ಕಾಪಾಡುವುದನ್ನು ತಡೆಯಲು ಸಾಧ್ಯವಿಲ್ಲ. 

ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ರಕ್ಷಣಾ ವಲಯವನ್ನು ಆತ್ಮನಿರ್ಭರ ಮಾಡಲು ಭಾರತ ವೇಗವಾಗಿ ಕೆಲಸ ಮಾಡುತ್ತಿದೆ. ಸ್ಥಳೀಯ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ಮೇಲೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ರಕ್ಷಣಾ ಕ್ಷೇತ್ರದ ಕುರಿತು ತೆಗೆದುಕೊಂಡಿರುವ ಈ ಒಂದು ನಿರ್ಧಾರ 130 ಕೋಟಿ ಭಾರತೀಯರು ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡುವುದಕ್ಕೆ ಧ್ವನಿಯೆತ್ತಲು ಪ್ರೇರಣೆ ನೀಡುತ್ತದೆ. 

ರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇಂದು ಇಡೀ ವಿಶ್ವವೇ ಸಮಸ್ಯೆಯನ್ನು ಎದುರಿಸುತ್ತಿದೆ. ಇದು ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಂತಾಗಿದ್ದು, 18ನೇ ಶತಮಾನದ ಚಿಂತನೆಗಳನ್ನು ನೆನಪಿಸುತ್ತಿದೆ. ಈ ಚಿಂತನೆಗಳ ವಿರುದ್ಧ ಭಾರತ ಬಲವಾದ ಧ್ವನಿಯೆತ್ತುತ್ತಿದೆ. ಇದೀಗ ಇಡೀ ವಿಶ್ವವೇ ಭಾರತ ಎಂದಿಗೂ, ಯಾವುದೇ ಪರಿಸ್ಥಿತಿಯಲ್ಲಿಯೂ ತನ್ನ ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದೆ. ನಿಮ್ಮ ಶಕ್ತಿ, ಶೌರ್ಯದಿಂದಾಗಿ ಭಾರತ ಇಂದು ಈ ಖ್ಯಾತಿ ಹಾಗೂ ನಿಲುವಿನೊಂದಿಗಿರಲು ಸಾಧ್ಯವಾಗಿದೆ. ಇಂದು ಅಂತರಾಷ್ಟ್ರೀಯ ವೇದಿಕಗಳಲ್ಲಿ ಭಾರತ ತನ್ನ ಸ್ಪಷ್ಟ ಹೇಳಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ. ಇದಕ್ಕೆ ನೀವು ಕಾರಣ. ನೀವು ಈ ರಾಷ್ಟ್ರದ ಬಲವನ್ನು ಹೆಚ್ಚಿಸಿದ್ದೀರಿ ಎಂದು ಭಾರತೀಯ ಯೋಧನ್ನು ಕೊಂಡಾಡಿದ್ದಾರೆ. 

ಸೇನಾಪಡೆಗಳು ಇರುವವರೆಗೂ ದೇಶ ದೀಪಾವಳಿ ಹಬ್ಬ ಆಚರಿಸುವುದನ್ನು ಮುಂದುವರೆಸಲಿದೆ. ಕೊರೋನಾ ಕಾರಣದಿಂದಾಗಿ ಇಂದು ನಾವು ಮಾಸ್ಕ್ ಗಳನ್ನು ಧರಿಸುತ್ತಿದ್ದೇವೆ. ಇದೀಗ ಜನರಿಗೆ ಗಡಿಯಲ್ಲಿ ಯೋಧರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅರಿತುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಗಳು ಜನರು ಶಿಸ್ತಿನಿಂದಿರುವಂತೆ ಮಾಡುತ್ತಿದೆ. 

ಇಂದು ಭಾರತದ ಕಾರ್ಯತಂತ್ರಗಳು ಸ್ಪಷ್ಟವಾಗಿವೆ. ಇತರರನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ನೀತಿಯನ್ನು ಭಾರತ ನಂಬಿದೆ. ಆದರೆ ನಮ್ಮನ್ನು ಪರೀಕ್ಷಿಸಲು ಪ್ರಯತ್ನಿಸಿದರೆ, ಅವರು ಪಡೆಯುವ ಉತ್ತರ ತೀವ್ರವಾಗಿರುತ್ತದೆ. 

ಈ ಸಂದರ್ಭದಲ್ಲಿ ಸೇನಾಪಡೆಗಳಲ್ಲಿ ಮೂರು ಅಂಶಗಳ ಕುರಿತು ಬೇಡಿಕೆ ಇಡುತ್ತಿದ್ದೇನೆ. ಮೊದಲನೆಯದು ಹೊಸತನದ ಮೂಲಕ ಜಾಣ್ಮೆ ಮುಂದುವರಿಸುವುದು; ಎರಡನೆಯದು ಯೋಗವನ್ನು ಅಭ್ಯಾಸ ಮಾಡುವುದು; ಮೂರನೆಯದು ಅವರ ಮಾತೃಭಾಷೆ ಮತ್ತು ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯನ್ನು ಕಲಿಯುವುದು. ಇದು ಯೋಧರಲ್ಲಿ ಹೊಸ ದೃಷ್ಟಿಕೋನಗಳು ಮತ್ತು ಉತ್ಸಾಹವನ್ನು ತುಂಬಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. 

ತಾಯ್ನಾಡಿಗೆ ನುಸುಳಿ ಬರುತ್ತಿರುವ ಉಗ್ರರನ್ನು ಹಾಗೂ ಅವರ ನಾಯಕರನ್ನು ಇಂದು ಸೇನಾಪಡೆಗಳು ಸದೆಬಡಿಯುತ್ತಿವೆ. ಇಂದು ಇಡೀ ವಿಶ್ವವೇ ಭಾರತದ ಎಂದಿಗೂ ತನ್ನ ಹಿತಾಸಕ್ತಿ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದೆ. ಇದೆಲ್ಲವೂ ನಿಮ್ಮಿಂದ ಸಾಧ್ಯವಾಗಿದೆ ಎಂದಿದ್ದಾರೆ. ಇದರೊಂದಿಗೆ ಮೋದಿಯವರು ತಮ್ಮ ಮಾತನ್ನು ಪೂರ್ಣಗೊಳಿಸುತ್ತಿದ್ದಂತೆಯೇ ಯೋಧರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com