ಕಾರು ನಿಲ್ಲಿಸುವಂತೆ ಹೇಳಿದ ಪೊಲೀಸಪ್ಪನ ಮೇಲೆ ಕಾರು ಹರಿಸಿದ ಭೂಪ, ನಾಲ್ವರಿಗೆ ಗಾಯ, ವಿಡಿಯೋ ವೈರಲ್!

ಸಂಚಾರಿ ನಿಯಮ ಮೀರಿದ ಹಿನ್ನಲೆಯಲ್ಲಿ ಕಾರು ನಿಲ್ಲಿಸುವಂತೆ ಹೇಳಿದ್ದ ಪೊಲೀಸ್ ಪೇದೆಯ ಮೇಲೆ ಚಾಲಕನೋರ್ವ ಕಾರು ಹರಿಸಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಪೇದೆ ಮೇಲೆ ಕಾರು ಹರಿಸಿದ ಚಾಲಕ
ಪೇದೆ ಮೇಲೆ ಕಾರು ಹರಿಸಿದ ಚಾಲಕ

ನಾಗಪುರ: ಸಂಚಾರಿ ನಿಯಮ ಮೀರಿದ ಹಿನ್ನಲೆಯಲ್ಲಿ ಕಾರು ನಿಲ್ಲಿಸುವಂತೆ ಹೇಳಿದ್ದ ಪೊಲೀಸ್ ಪೇದೆಯ ಮೇಲೆ ಚಾಲಕನೋರ್ವ ಕಾರು ಹರಿಸಿರುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.

ಪೊಲೀಸ್ ಪೇದೆ ಅಮೋಲ್ ಚಿದಂವರ್ ಎಂಬುವವರು ಸಕ್ಕಾರ್ದರಾ ಸರ್ಕಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಸಂಜೆ ಸುಮಾರು 5 ಗಂಟೆ ಹೊತ್ತಿನಲ್ಲಿ ಅದೇ ಮಾರ್ಗದಲ್ಲಿ ಬಂದ ಕಾರನ್ನು ನೋಡಿದ್ದಾರೆ. ಕಾರಿನ ಮಾಲೀಕ ನಿಯಮ ಮೀರಿ ಕಾರಿನ ಕಿಟಕಿ ಗ್ಲಾಸ್ ಗಳಿಗೆ ಟಿಂಟೆಡ್ ಕವರ್  ಗಳನ್ನು ಹಾಕಿದ್ದನ್ನು ಗಮನಿಸಿ ಕೂಡಲೇ ಆ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಕಾರು ನಿಲ್ಲಿಸದ ಕಾರಣ ಪೇದೆ ಚಿದಂವರ್ ಕಾರಿಗೆ ಅಡ್ಡ ಹೋಗಿದ್ದು, ಕಾರಿನ ಚಾಲಕ ಪೇದೆಯ ಮೇಲೆ ಕಾರು ಹರಿಸಲು ಮುಂದಾಗಿದ್ದಾನೆ. ಈ ವೇಳೆ ಪೇದೆ ಹಾರಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದು,  ಚಾಲಕ ಸುಮಾರು ಅರ್ಧ ಕಿ.ಮೀ ದೂರದವರೆಗೂ ಪೇದೆಯನ್ನು ಎಳೆದೊಯ್ದಿದ್ದಾನೆ. 

ಈ ಮಧ್ಯೆ ಮಾರ್ಗದಲ್ಲಿ ಸಿಕ್ಕ ವಾಹನಗಳಿಗೂ ಢಿಕ್ಕಿ ಹೊಡೆದಿದ್ದು, ಇದರಿಂದ ಹಲವರಿಗೆ ಗಾಯಗಳಾಗಿವೆ. ಅಂತಿಮವಾಗಿ ಕಾರು ಕಾಲೇಜೊಂದರ ಬಳಿ ನಿಂತಿದ್ದು. ಸ್ಥಳೀಯರೇ ಕಾರಿಗೆ ಅಡ್ಡಗಟ್ಟಿ ಕಾರನ್ನು ನಿಲ್ಲಿಸಿದ್ದಾರೆ. ಅಲ್ಲದೆ ಚಾಲಕನನ್ನು ಹೊರಗೆ ಎಳೆದು ಥಳಿಸಿ ಪೊಲೀಸರಿಗೆ  ಒಪ್ಪಿಸಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 353, 307 ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಚಾಲಕ ನಟೋರಿಯಸ್ ಕ್ರಿಮಿನಲ್ ಓರ್ವ ಸಹಚರನಾಗಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಇಂತಹ ದುಷ್ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com