ರಾಜಸ್ಥಾನದಲ್ಲಿ ದೋಣಿ ಮಗುಚಿ ದುರಂತ: ಕನಿಷ್ಠ 6 ಮಂದಿ ಸಾವು, ಹಲವರು ನಾಪತ್ತೆ!

ರಾಜಸ್ಥಾನದಲ್ಲಿ ಪ್ರಯಾಣಿಕ ದೋಣಿ ಮಗುಚಿ ದುರಂತ ಸಂಭವಿಸಿದ್ದು, ದುರ್ಘಟನೆಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ದೋಣಿ ದುರಂತ
ದೋಣಿ ದುರಂತ

ಜೈಪುರ: ರಾಜಸ್ಥಾನದಲ್ಲಿ ಪ್ರಯಾಣಿಕ ದೋಣಿ ಮಗುಚಿ ದುರಂತ ಸಂಭವಿಸಿದ್ದು, ದುರ್ಘಟನೆಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ರಾಜಸ್ಥಾನದ ಕೋಟಾ ಜಿಲ್ಲೆಯ ಚಂಬಲ್ ನದಿಯಲ್ಲಿ ಇಂದು ಬೆಳಗ್ಗೆ ಪ್ರಯಾಣಿಕ ದೋಣಿ ಮಗುಚಿ ಬಿದ್ದು ಆರು ಜನರು ಮುಳುಗಿ ಮೃತಪಟ್ಟಿದ್ದಾರೆ. ದೋಣಿಯಲ್ಲಿ ಸುಮಾರು 3 ಡಜನ್ ಗೂ ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ 30ಕ್ಕೂ  ಹೆಚ್ಚು ಗ್ರಾಮಸ್ಥರು ಒಂದು ದಂಡೆಯಿಂದ ಇನ್ನೊಂದು ದಡಕ್ಕೆ ದೋಣಿಯ ಮೂಲಕ ದಾಟುತ್ತಿದ್ದರು. ಕೆಲವು ಜನರು ತಮ್ಮ ಮೋಟಾರ್ ಸೈಕಲ್‌ಗಳನ್ನು ದೋಣಿಯಲ್ಲಿ ಸಾಗಿಸುತ್ತಿದ್ದರು. ಈ ವೇಳೆ ದೋಣಿ ಜನರ ಭಾರಕ್ಕೆ ಮುಗುಚಿಕೊಂಡಿದೆ. ಈ ವೇಳೆ ಹಲವರು ಈಜಿ ದಡ ಸೇರುವ ಪ್ರಯತ್ನ ಮಾಡಿದರು. ಇನ್ನೂ  ಹಲವರು ಈಜಲಾಗದೇ ಮುಳುಗಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಮಧ್ಯಪ್ರದೇಶದ ಗೋಥಲಾ ಕಲಾ ಬಳಿಯ ಕಮಲೇಶ್ವರ ಧಾಮವನ್ನು ನೋಡಲು ಹೆಚ್ಚಿನ ಜನರು ದೋಣಿಯಲ್ಲಿ ಸಾಗುತ್ತಿದರು. ಆದರೆ ದೋಣಿ ಜನರ ಅತಿಯಾದ ಭಾರ ಹಾಗೂ ಬೈಕ್‌ ಗಳ ತೂಕದಿಂದಾಗಿ ನದಿಯ ಮಧ್ಯದಲ್ಲಿ ಸಮತೋಲನವನ್ನು ಕಳೆದುಕೊಂಡು ಚನಾಡಾ ಮತ್ತು ಗೋಥಡಾ  ಗ್ರಾಮದ ನಡುವಿನ ಪ್ರದೇಶದಲ್ಲಿ ಮಗುಚಿಕೊಂಡಿತು. ಇನ್ನು ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಪಡೆಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಸ್ತುತ ಈ ವರೆಗೂ 6 ಮಂದಿಯ ದೇಹಗಳು ದೊರೆತಿದ್ದು, ನಾಪತ್ತೆಯಾಗಿರುವವರಿಗಾಗಿ ತೀವ್ರ  ಶೋಧ ನಡೆಸಲಾಗುತ್ತಿದೆ. 

ದೋಣಿ ದುರಂತ ವಿಚಾರ ತಿಳಿಯುತ್ತಲೇ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಅಂತೆಯೇ ಕೋಟಾದ ಚಂಬಲ್ ಬಳಿ ದೋಣಿ ಉರುಳಿ ಬಿದ್ದ ಘಟನೆ ದುರದೃಷ್ಟಕರ. ಅಪಘಾತಕ್ಕೀಡಾದವರ ಕುಟುಂಬಗಳಿಗೆ ನನ್ನ ಸಂತಾಪ.  ಅಂತೆಯೇ ಕೋಟಾದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಗೆಹ್ಲೊಟ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com