ಧರಣಿ ಅಂತ್ಯಗೊಳಿಸಿ ವಿಪಕ್ಷಗಳ ಅಧಿವೇಶನ ಬಹಿಷ್ಕಾರ ಪ್ರತಿಭಟನೆಗೆ ಕೈ ಜೋಡಿಸಿದ ಅಮಾನತುಗೊಂಡ ರಾಜ್ಯಸಭಾ ಸದಸ್ಯರು

ರಾಜ್ಯಸಭೆಯಲ್ಲಿ ಗದ್ದಲ ವೇರ್ಪಡಿಸಿ ಅಮಾನತುಗೊಂಡು ಧರಣಿ ನಡೆಸುತ್ತಿದ್ದ 8 ರಾಜ್ಯಸಭಾ ಸದಸ್ಯರು ತಮ್ಮ ಧರಣಿ ಅಂತ್ಯಗೊಳಿಸಿದ್ದು, ವಿಪಕ್ಷ ನಾಯಕರು ಆರಂಭಿಸಿರುವ ಅಧಿವೇಶನ ಬಹಿಷ್ಕಾರ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.
ವಿಪಕ್ಷ ನಾಯಕರ ಪ್ರತಿಭಟನೆ
ವಿಪಕ್ಷ ನಾಯಕರ ಪ್ರತಿಭಟನೆ

ನವದೆಹಲಿ: ರಾಜ್ಯಸಭೆಯಲ್ಲಿ ಗದ್ದಲ ವೇರ್ಪಡಿಸಿ ಅಮಾನತುಗೊಂಡು ಧರಣಿ ನಡೆಸುತ್ತಿದ್ದ 8 ರಾಜ್ಯಸಭಾ ಸದಸ್ಯರು ತಮ್ಮ ಧರಣಿ ಅಂತ್ಯಗೊಳಿಸಿದ್ದು, ವಿಪಕ್ಷ ನಾಯಕರು ಆರಂಭಿಸಿರುವ ಅಧಿವೇಶನ ಬಹಿಷ್ಕಾರ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.

ಕೃಷಿ ಮಸೂದೆ ವಿರೋಧಿಸಿ ಮತ್ತು ರಾಜ್ಯಸಭಾ ಸದಸ್ಯರ ಅಮಾನತು ವಿಚಾರವಾಗಿ ವಿಪಕ್ಷನಾಯಕರು ಅಧಿವೇಶನ ಬಹಿಷ್ಕಾರ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ ಧರಣಿ ನಿರತ ಅಮಾನತುಗೊಂಡಿದ್ದ ರಾಜ್ಯಸಭಾ ಸದಸ್ಯರೂ ಕೂಡ ಸಾಥ್ ನೀಡುತ್ತಿದ್ದಾರೆ. ಸಂಸತ್ ಭವನದ ಅವರಣದಲ್ಲಿ ಈ ಪ್ರತಿಭಟನೆ  ನಡೆಯುತ್ತಿದ್ದು, ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಮಸೂದೆ ಮತ್ತು ರಾಜ್ಯಸಭಾ ಸದಸ್ಯರ ಅಮಾನತು ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಅವರು, ಸದಸ್ಯರ ಅಮಾನತು ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಮತ್ತು ವಿವಾದಿತ ಕೃಷಿ ಮಸೂದೆಯನ್ನು ಹಿಂಪಡೆಯಬೇಕು. ಅಲ್ಲಿಯವರೆಗೂ ನಾವು ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಶೂನ್ಯವೇಳೆಯ ಬಳಿಕ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತಲೂ (ಎಂ.ಎಸ್.ಪಿ) ಕಡಿಮೆ ಬೆಲೆಗೆ ಖಾಸಗಿಯವರು ಆಹಾರಧಾನ್ಯ ಖರೀದಿಸಲು ಅವಕಾಶವಿಲ್ಲದಂತೆ ಮಸೂದೆಯನ್ನು ತರಬೇಕು. ಸ್ವಾಮಿನಾಥನ್ ಸೂತ್ರದ ಅನುಸಾರ ಕಾಲ ಕಾಲಕ್ಕೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ  ಬೆಂಬಲ ಬೆಲೆಯನ್ನು ಪರಿಷ್ಕರಿಸಬೇಕು ಎಂದು ಹೇಳಿದರು.

ಇದೇ ವಿಚಾರವಾಗಿ ಮಾತನಾಡಿದ  ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರು, ನಮ್ಮ ಅಮಾನತು ರದ್ದುಪಡಿಸುವುದು ಮಾತ್ರವಲ್ಲ, ಅದೇ ಸಮಯದಲ್ಲಿ ಕೃಷಿ ಮಸೂದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ರಾಜ್ಯಸಭೆಯಲ್ಲಿ ಸರಿಯಾದ ಮತದಾನ ನಡೆಯಬೇಕೆಂದು ನಾವು  ಬಯಸಿದ್ದೇವೆ. ಆದರೆ ಸಭಾಧ್ಯಕ್ಷರು ಯಾರ ಮಾತನ್ನೂ ಕೇಳಲು ಸಿದ್ಧರಿಲ್ಲದ ಕಾರಣ ಆ ರೀತಿಯ ಏನೂ ಆಗುವುದಿಲ್ಲ. ಆದ್ದರಿಂದ ಎಲ್ಲಾ ವಿರೋಧ ಪಕ್ಷಗಳು ಅಧಿವೇಶನದ ಉಳಿದ ಭಾಗವನ್ನು ಬಹಿಷ್ಕರಿಸಿವೆ. ಹಿರಿಯ ನಾಯಕರ ಸಲಹೆ ಮೇರೆಗೆ ಧರಣಿ ಅಂತ್ಯಗೊಳಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇವೆ ಎಂದು  ಹೇಳಿದರು. 

ಕೃಷಿ ಮಸೂದೆ ವಿರುದ್ಧದ ಚರ್ಚೆ ವೇಳೆ ಅನುಚಿತ ವರ್ತನೆ ಆರೋಪದ ಮೇಲೆ ರಾಜ್ಯಸಭೆಯ ಎಂಟು ಸದಸ್ಯರನ್ನು ಅಮಾನತುಪಡಿಸಲಾಗಿತ್ತು. ಗದ್ದಲದ ನಡುವೆಯೇ, ಮಸೂದೆಯೂ ಧ್ವನಿಮತದಿಂದ ಅಂಗೀಕಾರಗೊಳಿಸಲಾಗಿತ್ತು.

ವಿರೋಧಪಕ್ಷಗಳಿಂದ ಸಭಾತ್ಯಾಗ
ಎಂಟು ಸದಸ್ಯರ ಅಮಾನತು ಆದೇಶ ರದ್ದುಪಡಿಸಲು ಆಗ್ರಹಪಡಿಸಿ ಇದಕ್ಕೂ ಮೊದಲು ವಿರೋಧಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು. ಕಾಂಗ್ರೆಸ್ ಮೊದಲಿಗೆ ಸದನದಿಂದ ಹೊರನಡೆದರೆ, ಹಿಂದೆಯೇ ಎಎಪಿ, ಟಿಎಂಸಿ ಮತ್ತು ಎಡಪಕ್ಷಗಳು ಕೂಡಾ ಹೊರನಡೆದವು. ಈ ಪಕ್ಷಗಳಿಗೆ ಸೇರಿದ ಎಂಟು  ಸದಸ್ಯರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಪಡಿಸಲಾಗಿದೆ. ಅಲ್ಲದೆ ಎನ್.ಸಿ.ಪಿ., ಎಸ್.ಪಿ., ಶಿವಸೇನೆ, ಆರ್.ಜೆ.ಡಿ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾತ್ಯಾಗ ನಿರ್ಧಾರ ಕೈಬಿಡಲು ಸಭಾಪತಿ ಎಂ.ವೆಂಕಯ್ಯನಾಯ್ಡು ಮನವಿ ಮಾಡಿದರು. ಆದರೆ, ವಿರೋಧಪಕ್ಷಗಳು ಇದನ್ನು  ಪುರಸ್ಕರಿಸಲಿಲ್ಲ.  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಕಲಾಪವನ್ನು ಸುಲಲಿತವಾಗಿ ನಡೆಸಲು ಸರ್ಕಾರ ಮತ್ತು ವಿರೋಧಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಬೇಕು ಎಂದು ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com