ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸ್ಪೋಟಕ ತುಂಬಿದ್ದ ವಾಹನ ಪತ್ತೆ ಪ್ರಕರಣ: ಸಚಿನ್ ವಾಜೆ ಸಹಚರ, ಪೊಲೀಸ್‌ ಅಧಿಕಾರಿ ರಿಯಾಜ್‌ ಬಂಧಿಸಿದ ಎನ್ಐಎ

ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಪೊಲೀಸ್‌ ಅಧಿಕಾರಿ ರಿಯಾಜ್‌ ಖಾಜಿ ಅವರನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಭಾನುವಾರ ಬಂಧನಕ್ಕೊಳಪಡಿಸಿದೆ.
Published on

ಮುಂಬೈ: ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಪೊಲೀಸ್‌ ಅಧಿಕಾರಿ ರಿಯಾಜ್‌ ಖಾಜಿ ಅವರನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಭಾನುವಾರ ಬಂಧನಕ್ಕೊಳಪಡಿಸಿದೆ.

ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್‌ ವಾಜೆ ಅವರಿಗೆ ರಿಯಾಜ್‌ ಸಹಕಾರ ನೀಡಿದ್ದರು ಎಂದು ಎನ್‌ಐಎ ಹೇಳಿದೆ. 

ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕಗಳನ್ನು ತುಂಬಿದ ವಾಹನ ಪತ್ತೆ ಪ್ರಕರಣ ಮತ್ತು ಉದ್ಯಮಿ ಮನ್‌ಸುಖ್‌ ಹಿರೇನ್ ಸಾವಿನ ಪ್ರಕರಣದಲ್ಲಿ ಎನ್‌ಐಎ ಕಳೆದ ತಿಂಗಳು ಸಚಿನ್ ವಾಜೆ ಅವರನ್ನು ಬಂಧಿಸಿತ್ತು. .

ಸಚಿನ್‌ ವಾಜೆ ರೀತಿಯೇ ರಿಯಾಜ್‌ ಕೂಡ ಅಸಿಸ್ಟೆಂಟ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಮಾರ್ಚ್‌ 5ರಂದು ಶವವಾಗಿ ಪತ್ತೆಯಾದ ಉದ್ಯಮಿ ಹಿರೇನ್‌ ಅವರ ಸ್ಕಾರ್ಪಿಯೊ ಕಾರನ್ನು ಸಚಿನ್‌ ವಾಜೆ ಬಾಂಬ್‌ ಬೆದರಿಕೆಗಾಗಿ ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. 

ಸ್ಫೋಟಕಗಳಿದ್ದ ಕಾರು ಫೆಬ್ರುವರಿ 25ರಂದು ಮುಕೇಶ್‌ ಅಂಬಾನಿ ನಿವಾಸ ಆಂಟಿಲಿಯಾ ಮುಂಭಾಗದಲ್ಲಿ ಪತ್ತೆಯಾಗಿತ್ತು. ಆ ಪ್ರಕರಣಗಳಲ್ಲಿ ಸಚಿನ್‌ರನ್ನು ಮಾರ್ಚ್‌ 13ರಂದು ಎನ್‌ಐಎ ಬಂಧಿಸಿತ್ತು.

ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಕಳೆದ ತಿಂಗಳು ಎರಡೂ ಪ್ರಕರಣಗಳನ್ನು ಎನ್‌ಐಎ ಮಹಾರಾಷ್ಟ್ರದ ಉಗ್ರ ನಿಗ್ರಹ ತಂಡದಿಂದ ತನಿಖೆಗೆ ಹಸ್ತಾಂತರಿಸಿಕೊಂಡಿತ್ತು. ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್‌ ಸಿಂಗ್‌, ಇಬ್ಬರು ಡೆಪ್ಯೂಟಿ ಕಮಿಷನರ್‌ಗಳು ಹಾಗೂ ಅಪರಾಧ ಗುಪ್ತಚರ ದಳ ಹತ್ತಾರು ಪೊಲೀಸರು ಸೇರಿದಂತೆ 40ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಈ ನಡುವೆ ಹಿರೇನ್ ಸಾವಿನ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com