ಸ್ವಾತಂತ್ರ್ಯ ದಿನಾಚರಣೆ: ರೈತರ ಪ್ರತಿಭಟನೆ ಭೀತಿ, ರಾಜಧಾನಿ ದೆಹಲಿಯಲ್ಲಿ ಭಾರಿ ಭದ್ರತೆ

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.
ದೆಹಲಿಯಲ್ಲಿ ಭಾರಿ ಭದ್ರತೆ
ದೆಹಲಿಯಲ್ಲಿ ಭಾರಿ ಭದ್ರತೆ

ನವದೆಹಲಿ: ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.

ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಪ್ರತಿಭಟಿಸಲು ರೈತರು ಎಂಟು ತಿಂಗಳಿನಿಂದ ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ ದೆಹಲಿ-ಗಡಿಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ, ಕೆಂಪು ಕೋಟೆಯಲ್ಲಿ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದ್ದು, ಇಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದಲ್ಲದೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳು ಸೇರಿದಂತೆ ಗಡಿ ಪ್ರದೇಶಗಳು ಸೇರಿದಂತೆ ಇನ್ನಿತರೆ ಯಾವುದೇ ಪ್ರದೇಶಗಳಲ್ಲೂ ಅಹಿತಕರ ಘಟನೆಗಳು ನಡೆಯದಂತೆ ಅವುಗಳನ್ನು ತಡೆಯಲು ನಗರದಾದ್ಯಂತದ ಪ್ರಮುಖ ರಸ್ತೆಗಳಲ್ಲಿ  ಬ್ಯಾರಿಕೇಡ್ ಗಳು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಗಳ ನಿಯೋಜನೆಗಳೊಂದಿಗೆ ಬಹು-ಹಂತದ ಭದ್ರತಾ ವ್ಯವಸ್ಥೆಗಳು ಸಹ ಈಗಾಗಲೇ ನಿಯೋಜನೆಗೊಂಡಿವೆ. 

ನಾಕಾ ಬಂದಿ
ದೆಹಲಿಯ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪ್ರತೀಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ದೆಹಲಿಯ ಪೊಲೀಸರು ಮೋಟಾರ್ ಬೈಕ್ ಗಳಲ್ಲಿ ಗಸ್ತು ನಡೆಸುತ್ತಿದ್ದರೆ, ಮೊಟಾರ್ ಬೋಟ್ ಗಳಲ್ಲಿ ವಿಶೇಷ ಸಿಬ್ಬಂದಿ ಯಮುನಾ  ನದಿ ಸೇರಿದಂತೆ ನಗರದಾದ್ಯಂತ ಗಸ್ತು ನಡೆಸುತ್ತಿದ್ದಾರೆ.  

ಈ ಕುರಿತಂತೆ ಮಾತನಾಡಿರುವ ದೆಹಲಿ ಪೋಲಿಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಚಿನ್ಮೊಯ್ ಬಿಸ್ವಾಲ್ ಅವರು, ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಕೆಂಪುಕೋಟೆ ಮತ್ತು ಸುತ್ತಮುತ್ತಲಿನ ಇತರ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯದಿಂದ ಸಮಗ್ರ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತಿಕೂಲ  ಪರಿಸ್ಥಿತಿಗಳನ್ನು ಎದುರಿಸಲು ವ್ಯವಸ್ಥೆ ಮಾಡಲಾಗಿದೆ. ವೈಮಾನಿಕ ವಸ್ತುಗಳಿಗೆ ಅವಕಾಶ ನಿರಾಕರಿಸಲಾಗಿದೆ. ಪ್ಯಾರಾ-ಗ್ಲೈಡರ್‌ಗಳು, ಪ್ಯಾರಾ-ಮೋಟಾರ್‌ ಗಳು, ಹ್ಯಾಂಗ್ ಗ್ಲೈಡರ್‌ಗಳು, ಯುಎವಿಗಳು, ಮೈಕ್ರೋ ಲೈಟ್ ಏರ್‌ಕ್ರಾಫ್ಟ್‌ಗಳು, ರಿಮೋಟ್ ಪೈಲಟ್ ವಿಮಾನಗಳು, ಹಾಟ್ ಏರ್ ಬಲೂನ್‌ಗಳು, ಸಣ್ಣ ಗಾತ್ರದ  ವಿಮಾನಗಳು, ಕ್ವಾಡ್‌ಕಾಪ್ಟರ್‌ಗಳು ಅಥವಾ ವಿಮಾನದಿಂದ ಪ್ಯಾರಾ-ಜಂಪಿಂಗ್ ಮುಂತಾದ ವೈಮಾನಿಕ ಉಪಕರಣಗಳ ಹಾರಾಟವನ್ನು ಆಗಸ್ಟ್ 16 ರವರೆಗೆ ನಿಷೇಧಿಸಲಾಗಿದೆ. ಆದರೆ ಈ ಸ್ವಾತಂತ್ರ್ಯ ದಿನದಂದು ಬಲೂನ್ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಇನ್ನು ಕೆಂಪುಕೋಟೆಯಲ್ಲಿ NSG ಸ್ನೈಪರ್‌ಗಳು, SWAT ಕಮಾಂಡೋಗಳು ಮತ್ತು ಗಾಳಿಪಟ ಹಿಡಿಯುವವರು (kite catchers) ಸೇರಿದಂತೆ ಇತರೆ ಭದ್ರತಾ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ, ಆದರೆ ಜಮ್ಮು ವಿಮಾನ ನಿಲ್ದಾಣದ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ  ದೃಷ್ಟಿಯಿಂದ ಇಲ್ಲಿ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು ಸಹ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

ಸಿವಿಲ್ ಡ್ರೆಸ್ ನಲ್ಲಿರುವ ಪೋಲೀಸರನ್ನು ರಾಜಧಾನಿಯಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಕೆಂಪು ಕೋಟೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಭಯೋತ್ಪಾದನಾ ವಿರೋಧಿ ಕ್ರಮಗಳ ಭಾಗವಾಗಿ, ಹೆಚ್ಚುವರಿ ಪೊಲೀಸ್ ಉಪಸ್ಥಿತಿ, ಸೂಕ್ಷ್ಮ ಸ್ಥಳಗಳಲ್ಲಿ ತೀವ್ರ ತಪಾಸಣೆ, ಹೋಟೆಲ್‌ಗಳು ಮತ್ತು  ಅತಿಥಿ ಗೃಹಗಳು, ಸಿಮ್ ಕಾರ್ಡ್ ಮತ್ತು ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‌ಗಳ ತಪಾಸಣೆ, ಸೈಬರ್ ಕೆಫೆ ಮಾಲೀಕರು ಮತ್ತು ಬಾಡಿಗೆದಾರರು ಮತ್ತು ಸ್ವಯಂ ಸೇವಕರ ಪರಿಶೀಲನೆಯನ್ನು ತೀವ್ರವಾಗಿ ಕೈಗೊಳ್ಳಲಾಗಿದೆ.

ಕಡ್ಡಾಯ ವಾಹನ ತಪಾಸಣೆ
ಎಲ್ಲ ವಾಹನಗಳನ್ನು ಸಂಶಯಾಸ್ಪದ ಚಟುವಟಿಕೆಗಾಗಿ ವಿಶೇಷವಾಗಿ ಗಡಿಭಾಗಗಳಲ್ಲಿ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಪಿಸಿಆರ್‌ ವ್ಯಾನ್‌ಗಳು, 'ಪ್ರಖರ್‌' ವ್ಯಾನ್‌ಗಳು ಮತ್ತು ಕ್ಯೂಆರ್‌ಟಿ (ಕ್ವಿಕ್‌ ರಿಯಾಕ್ಷನ್ ಟೀಮ್‌) ವ್ಯಾನ್‌ಗಳನ್ನು ಭದ್ರತಾ ನಿಯೋಜನೆಯ ಭಾಗವಾಗಿ ಇರಿಸಲಾಗಿದ್ದು, ನಗರದಾದ್ಯಂತ  ಮೋಟಾರ್‌ಸೈಕಲ್‌ನಲ್ಲಿ ಪೊಲೀಸ್ ಸಿಬ್ಬಂದಿಯಿಂದ ತೀವ್ರ ಗಸ್ತು ನಡೆಸುತ್ತಿದ್ದಾರೆ. ದೆಹಲಿಯ ಟ್ರಾಫಿಕ್ ಪೋಲಿಸರು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ನಗರಾದ್ಯಂತ ವಾಹನಗಳ ಸುರಕ್ಷಿತ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ. ಇದಕ್ಕಾಗಿ ಅಂದು  ಹೆಚ್ಚುವರಿ ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗಿದೆ. 

8 ರಸ್ತೆಗಳು ಬಂದ್
ಪ್ರಮುಖವಾಗಿ ನೇತಾಜಿ ಸುಭಾಷ್ ಮಾರ್ಗ, ಲೋಥಿಯಾನ್ ರಸ್ತೆ, ಎಸ್ಪಿ ಮುಖರ್ಜಿ ಮಾರ್ಗ, ಚಾಂದಿನಿ ಚೌಕ್ ರಸ್ತೆ, ನಿಶಾದ್ ರಾಜ್ ಮಾರ್ಗ, ಎಸ್ಪ್ಲೇನೇಡ್ ರಸ್ತೆ ಮತ್ತು ನೇತಾಜಿ ಸುಭಾಷ್ ಮಾರ್ಗಕ್ಕೆ ಅದರ ಸಂಪರ್ಕ ರಸ್ತೆ, ರಾಜಘಟ್ಟದಿಂದ ಐಎಸ್‌ಬಿಟಿಗೆ ರಿಂಗ್ ರಸ್ತೆ ಮತ್ತು ಐಎಸ್‌ಬಿಟಿಯಿಂದ ಐಪಿ ಫ್ಲೈಓವರ್  ವರೆಗೆ ಹೊರವರ್ತುಲ ರಸ್ತೆಗಳು ಸಾರ್ವಜನಿಕರಿಗೆ ಬೆಳಿಗ್ಗೆ 4 ರಿಂದ 10 ರವರೆಗೆ ಮುಚ್ಚಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com