ಪತ್ನಿಗೆ ವಿಚ್ಛೇದನ ನೀಡಬಹುದು, ಮಕ್ಕಳಿಗಲ್ಲ, ಅವರ ಪಾಲನೆ-ಪೋಷಣೆ ನೋಡಿಕೊಳ್ಳಬೇಕು: ಸುಪ್ರೀಂ ಕೋರ್ಟ್

ಪತ್ನಿಗೆ ವಿಚ್ಛೇದನ ನೀಡಬಹುದು ಆದರೆ ಮಕ್ಕಳಿಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲ, ಅವರ ಉಸ್ತುವಾರಿ ಆರೈಕೆಗೆ 6 ವಾರಗಳೊಳಗೆ 4 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪ್ರಕರಣವೊಂದರಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಪತ್ನಿಗೆ ವಿಚ್ಛೇದನ ನೀಡಬಹುದು ಆದರೆ ಮಕ್ಕಳಿಗೆ ವಿಚ್ಛೇದನ ನೀಡಲು ಸಾಧ್ಯವಿಲ್ಲ, ಅವರ ಉಸ್ತುವಾರಿ ಆರೈಕೆಗೆ 6 ವಾರಗಳೊಳಗೆ 4 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪ್ರಕರಣವೊಂದರಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ಸಂವಿಧಾನ ವಿಧಿ 142ರಡಿಯಲ್ಲಿ ದಂಪತಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ, ಒಪ್ಪಂದದ ಪ್ರಕಾರ ವಿಚ್ಛೇದಿತ ದಂಪತಿ ಪರಿಹಾರ ಷರತ್ತುಗಳಿಗೆ ಬದ್ಧರಾಗಿಬೇಕೆಂದು ಹೇಳಿತು.

ವಿಚಾರಣೆ ವೇಳೆ ಪತಿಯ ಪರ ವಕೀಲ, ಸಂಧಾನ ಪ್ರಕ್ರಿಯೆ ಹಂತದಲ್ಲಿ ಎರಡೂ ಕಡೆಯ ಮಧ್ಯೆ ಒಪ್ಪಿಗೆಗೆ ಬರಲಾಗಿದ್ದು ಪತ್ನಿಗೆ ಪರಿಹಾರವಾಗಿ 4 ಕೋಟಿ ರೂಪಾಯಿ ನೀಡಲು ಸಮಯಾವಕಾಶ ಬೇಕೆಂದು ಕೇಳಿದರು. ಕೋವಿಡ್ ಸಾಂಕ್ರಾಮಿಕದಿಂದಾಗಿ ತಮ್ಮ ಪರ ಕಕ್ಷಿದಾರನ ವ್ಯಾಪಾರ-ವಹಿವಾಟು ಆದಾಯದ ಮೇಲೆ ಹೊಡೆತ ಬಿದ್ದಿದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

ಅದಕ್ಕೆ ನ್ಯಾಯಪೀಠ, ವಿಚ್ಛೇದನ ಇತ್ಯರ್ಥ ಸಮಯದಲ್ಲಿಯೇ ಪರಿಹಾರ ನೀಡುವುದಾಗಿ ಈ ಹಿಂದೆ ಒಪ್ಪಿಕೊಂಡಿದ್ದಿರಿ, ಈಗ ನೀವು 4 ಕೋಟಿ ರೂಪಾಯಿ ನೀಡಲೇಬೇಕು, ಪರಿಹಾರ ಮೊತ್ತ ನೀಡಲು ಸ್ವಲ್ಪ ಸಮಯಾವಕಾಶ ಕೊಡಿ ಎಂದು ಕೇಳುತ್ತಿರುವುದು ಸರಿಯಲ್ಲ ಎಂದಿತು.

ನೀವು ನಿಮ್ಮ ಪತ್ನಿಗೆ ವಿಚ್ಛೇದನ ನೀಡಬಹುದು ಆದರೆ ಮಕ್ಕಳಿಗಲ್ಲ, ನೀವು ಮಕ್ಕಳಿಗೆ ಜನ್ಮ ಕೊಟ್ಟಿದ್ದೀರಿ. ಅವರ ಲಾಲನೆ, ಪಾಲನೆ ಮಾಡಬೇಕು. ಮಕ್ಕಳ ಪೋಷಣೆಗೆ ವಿಚ್ಛೇದಿತ ಪತ್ನಿಗೆ ಪರಿಹಾರ ಮೊತ್ತ ನೀಡಬೇಕಾಗುತ್ತದೆ ಎಂದು ನ್ಯಾಯಾಧೀಶರು ಖಾರವಾಗಿ ಉತ್ತರಿಸಿದರು.

ವಿಚ್ಛೇದಿತ ಪತ್ನಿಗೆ ಮಕ್ಕಳ ಪಾಲನೆ, ಪೋಷಣೆಗೆ ಪರಿಹಾರ ಮೊತ್ತದಲ್ಲಿ 1 ಕೋಟಿ ರೂಪಾಯಿಗಳನ್ನು ಸೆಪ್ಟೆಂಬರ್ 1ರೊಳಗೆ, ಮತ್ತೆ 3 ಕೋಟಿ ರೂಪಾಯಿಗಳನ್ನು ಸೆಪ್ಟೆಂಬರ್ 30ರೊಳಗೆ ನೀಡಲೇಬೇಕು ಎಂದು ನ್ಯಾಯಾಧೀಶರು ತಾಕೀತು ಮಾಡಿದರು.

ಪತಿ ಪರ ವಕೀಲರು, ಇಬ್ಬರೂ ವಿಚ್ಛೇದನ ನಿರ್ಧಾರಕ್ಕೆ ಬಂದು ಪರಿಹಾರ ನೀಡುವ ಬಗ್ಗೆ ಮಾತುಕತೆ ಒಪ್ಪಂದ ನಡೆದ ನಂತರ ಕೋವಿಡ್ ಸೋಂಕು ಬಂದು ಲಾಕ್ ಡೌನ್ ನಿಂದ ವ್ಯಾಪಾರ ಮೇಲೆ ತೀವ್ರ ಹೊಡೆತ ಬಿದ್ದು , ತಮ್ಮ ಕಕ್ಷಿದಾರರು ನಷ್ಟ, ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದರು.

"ನಾನು ಪರಿಹಾರ ನೀಡುವುದಿಲ್ಲ ಎಂದು ಹೇಳುತ್ತಿಲ್ಲ ಆದರೆ ಮೊತ್ತವನ್ನು ಪಾವತಿಸಲು ಸ್ವಲ್ಪ ಸಮಯವನ್ನು ಕೇಳುತ್ತಿದ್ದೇನೆ. ನಾನು ಒಂದು ತಿಂಗಳಲ್ಲಿ ಒಂದು ಕೋಟಿ ಪಾವತಿಸುತ್ತೇನೆ ಮತ್ತು ನಂತರ ಮೂರು ತಿಂಗಳ ನಂತರ ಇನ್ನೊಂದು ಕೋಟಿಯನ್ನು ಪಾವತಿಸುತ್ತೇನೆ ಎಂದರು.

2019 ರ ಆಗಸ್ಟ್‌ನಲ್ಲಿ ಪತಿ-ಪತ್ನಿ ನಡುವೆ ಆದ ಒಪ್ಪಂದದಂತೆ 4 ಕೋಟಿ ರೂಪಾಯಿ ನೀಡಲು ಒಪ್ಪಂದವಾಗಿತ್ತು, ಆಗ ಕೋವಿಡ್ ಸಾಂಕ್ರಾಮಿಕ ಬಂದಿರಲಿಲ್ಲ, ಪತಿಗೆ ಆಗಲೇ ಹಣ ನೀಡಬಹುದಾಗಿತ್ತು, ಒಪ್ಪಂದದ ಪ್ರಕಾರ, ಮುಂಬೈನಲ್ಲಿ ರತ್ನ-ಆಭರಣ ವ್ಯವಹಾರದಲ್ಲಿರುವ ಪತಿ, 2019ರಲ್ಲಿ 1 ಕೋಟಿ ರೂಪಾಯಿ ಮಾತ್ರ ನೀಡಿದ್ದರು, ಅಂದೇ 4 ಕೋಟಿ ಸಂಪೂರ್ಣ ಮೊತ್ತವನ್ನು ನೀಡಬೇಕಾಗಿತ್ತು ಎಂದು ಹೇಳಿದೆ.

ವಿಚ್ಛೇದನ ಪಡೆದುಕೊಂಡ ಜೋಡಿಗೆ ಗಂಡು ಮತ್ತು ಹೆಣ್ಣು ಮಗುವಿದ್ದು, ಮಕ್ಕಳ ಲಾಲನೆ, ಪಾಲನೆ, ಪೋಷಣೆಯನ್ನು ಇಬ್ಬರೂ ನೋಡಿಕೊಳ್ಳುವಂತೆ ಮಾತುಕತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com