ಕೋಲ್ಕತಾ: ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಲು ಪ್ರಕೃತಿಯೇ ವಿನಾಶದ ಮೂಲಕ ಮುಂದಾಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರೆತಿದ್ದು, ವಾಯುಮಾಲೀನ್ಯದಿಂದ ಸಮಸ್ಯೆ ಎದುರಿಸುತ್ತಿದ್ದ ಕೋಲ್ಕತಾದಲ್ಲಿ ಇದೀಗ ಶೇ.90ರಷ್ಟು ವಾಯುಗುಣಮಟ್ಟ ಚೇತರಿಕೆ ಕಂಡಿದೆ.
ಹೌದು... ಕೋಲ್ಕತಾದ ವಾಯುಗುಣಮಟ್ಟ ಶೇ.90ರಷ್ಟು ಚೇತರಿಕೆಯಾಗಿದ್ದು, ಇದಕ್ಕೆ ಕಾರಣ ಚಂಡಮಾರುತ... ಇತ್ತೀಚೆಗೆ ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ವ್ಯಾಪಕ ಸಮಸ್ಯೆಗಳಿಗೆ ಕಾರಣವಾಗಿದ್ದ ಜವಾದ್ ಚಂಡಮಾರುತದಿಂದಾಗಿ ಕೋಲ್ಕತಾದಲ್ಲಿ ವಾಯು ಗುಣಮಟ್ಟದಲ್ಲಿ ಶೇ.90ರಷ್ಟು ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ.
ಕಳೆದೆರಡು ದಿನಗಳಲ್ಲಿ ಜವಾದ್ ಚಂಡಮಾರುತದ ನಂತರ ಕೋಲ್ಕತ್ತಾದ ಗಾಳಿಯ ಗುಣಮಟ್ಟವು ಸುಮಾರು 80ರಿಂದ 90 ಪ್ರತಿಶತದಷ್ಟು ಸುಧಾರಿಸಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಪರಿಸರವಾದಿಗಳು ಮಂಗಳವಾರ ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಕೋಲ್ಕತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ (ಉತ್ತಮ) ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 20ರಷ್ಟಿತ್ತು. ಅಂತೆಯೇ ವಿಕ್ಟೋರಿಯಾ ಸ್ಮಾರಕಕದಲ್ಲಿ 43 (ಉತ್ತಮ) ಬ್ಯಾಲಿಗುಂಗೆ 33 (ಉತ್ತಮ), ಮತ್ತು ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ 51 (ತೃಪ್ತಿದಾಯಕ) ಗುಣಮಟ್ಟ ದಾಖಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಒದಗಿಸಿದ ಮಾಹಿತಿಯಂತೆ ಡಿಸೆಂಬರ್ 3 ರಂದು ಬೆಳಿಗ್ಗೆ 9 ಗಂಟೆಗೆ ವಿಕ್ಟೋರಿಯಾ ಸ್ಮಾರಕದಲ್ಲಿ 185 (ಮಧ್ಯಮ), ಬ್ಯಾಲಿಗುಂಜ್‌ನಲ್ಲಿ 212 (ಕಳಪೆ), ರವೀಂದ್ರ ಸರೋಬರ್‌ನಲ್ಲಿ 163 (ಮಧ್ಯಮ), ಮತ್ತು ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ 307 (ಅತ್ಯಂತ ಕಳಪೆ) ಇತ್ತು ಎಂದು ಅದು ಹೇಳಿದೆ.
"ಚಂಡಮಾರುತ-ಪ್ರೇರಿತ ಮಳೆಯು ನಗರವನ್ನು ಅಪ್ಪಳಿಸಿದ ನಂತರ ಕೋಲ್ಕತ್ತಾದ AQI ನಲ್ಲಿ ಗರಿಷ್ಠ 90 ಪ್ರತಿಶತ ಮತ್ತು ಕನಿಷ್ಠ 80 ಪ್ರತಿಶತ ಸುಧಾರಣೆ ವರದಿಯಾಗಿದೆ. ಇದು ಕಳೆದ 40 ವರ್ಷಗಳಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಗರಕ್ಕೆ ದಾಖಲೆಯ ಕಡಿಮೆಯಾಗಿದೆ ಎಂದು ಪರಿಸರವಾದಿ ಎಸ್.ಎಂ.ಘೋಷ್ ತಿಳಿಸಿದ್ದಾರೆ.
Advertisement