ಹೊಸ ಗೌಪ್ಯತಾ ನೀತಿ ಒಪ್ಪಿಕೊಳ್ಳುವಂತೆ ಬಳಕೆದಾರರ ಒತ್ತಾಯಿಸುವುದಿಲ್ಲ: ದೆಹಲಿ ಹೈಕೋರ್ಟ್'ಗೆ ವಾಟ್ಸಾಪ್ ಹೇಳಿಕೆ

ದತ್ತಾಂಶ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೂ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳುವಂತೆ ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್'ಗೆ ವಾಟ್ಸಾಪ್ ಶುಕ್ರವಾರ ಸ್ಪಷ್ಟಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದತ್ತಾಂಶ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೂ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳುವಂತೆ ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್'ಗೆ ವಾಟ್ಸಾಪ್ ಶುಕ್ರವಾರ ಸ್ಪಷ್ಟಪಡಿಸಿದೆ. 

ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ಬಗ್ಗೆ ತನಿಖೆ ನಡೆಸುವಂತೆ ಭಾರತದ ಸ್ಪರ್ಧಾ ಆಯೋಗ ಸಿಸಿಐ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಫೇಸ್‌ಬುಕ್ ಮತ್ತು ವಾಟ್ಸಾಪ್ ದೆಹಲಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಇಂದು ಹೇಳಿಕೆ ನೀಡಿದ್ದು, ದತ್ತಾಂಶ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೂ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳುವಂತೆ ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ಹೇಳಿದೆ.

ವಾಟ್ಸಾಪ್ ಪರ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಹೊಸ ನೀತಿಯನ್ನು ತಡೆ ಹಿಡಿಯಲು ನಿರ್ಧರಿಸಲಾಗಿದ್ದು, ಯಾವುದೇ ಬಳಕೆದಾರರೂ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳುವಂತೆ ನಾವು ಒತ್ತಾಯಿಸುವುದಿಲ್ಲ. ಆದಾಗ್ಯೂ ವಾಟ್ಸಾಪ್ ತನ್ನ ಬಳಕೆದಾರರಿಗೆ ನವೀಕರಣ (ಅಪ್ಡೇಟ್) ವನ್ನು ಪ್ರದರ್ಶಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳದವರ ವಾಟ್ಸಾಪ್ ಬಳಕೆಯನ್ನು ಮಿತಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕಳೆದ ವರ್ಷ ವಾಟ್ಸಾಪ್, ಖಾಸಗಿತನ ನೀತಿ ಒಪ್ಪಿಕೊಳ್ಳಿ ಎಂದು ಬಳಕೆದಾರರಿಗೆ ವಾಟ್ಸಾಪ್ ತಾಕೀತು ಮಾಡಿತ್ತು. ಮಾಡದೇ ಇದ್ದರೆ ಅಂತಹ ಬಳಕೆದಾರರ ಖಾತೆ ನಿಷ್ಕ್ರಿಯಗೊಳಿಸುವುದಾಗಿ ಎಚ್ಚರಿಸಿತ್ತು. ಆದರೆ, ಈ ನೀತಿ ಒಪ್ಪಿದರೆ ತಮ್ಮ ಖಾಸಗಿತನಕ್ಕೆ ಭಂಗ ಬರಬಹುದು ಎಂದು ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದರು. ವಾಟ್ಸಾಪ್'ನ ಈ ನೀತಿ ವಿವಾದಕ್ಕೀಡಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com