ನವದೆಹಲಿ: ದೇಶದಲ್ಲಿ ಕೋವಿಡ್ ಲಾಕ್ಡೌನ್ ಅನ್ನು ತೆರವುಗೊಳಿಸಿದ ಬಳಿಕ ಜನರು ಯಾವುದೇ ರೀತಿಯ ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ... ದೇಶದಲ್ಲಿ ಕೋವಿಡ್ ಮೂರನೇ ಅಲೆ ನಿಶ್ಚಿತವಾಗಿದ್ದು, ಧಾರ್ಮಿಕ ಯಾತ್ರೆ, ಪ್ರವಾಸೋದ್ಯಮ ಆರಂಭಕ್ಕೆ ರಾಜ್ಯಸರ್ಕಾರಗಳು ಆತುರ ಪಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಹೇಳಿದೆ.
ದೇಶದಲ್ಲಿ ಸಂಭಾವ್ಯ ಕೋವಿಡ್ ಸಾಂಕ್ರಾಮಿಕ ಮೂರನೇ ಅಲೆ ಕುರಿತು ಮಾಹಿತಿ ನೀಡಿರುವ ಐಎಂಎ, ಜನರು ಅನ್ ಲಾಕ್ ಬಳಿಕ ಯಾವುದೇ ರೀತಿಯ ಕೋವಿಡ್ ನಿಯಮಗಳನ್ನು ಅನುಸರಿಸುತ್ತಿಲ್ಲ. ಈ ಬಗ್ಗೆ ಸರ್ಕಾರಗಳೂ ಕೂಡ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಜನರು ತಮ್ಮ ಮನಸೋ ಇಚ್ಛೆ ತಿರುಗಾಡುತ್ತಿದ್ದಾರೆ. ಯಥೇಚ್ಛ ಜನಸಂದಣಿ ಇರುವಕಡೆಗಳಲ್ಲಿ ಸಾಮೂಹಿಕ ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ದೇಶದಲ್ಲಿ ಮೂರನೇ ಅಲೆ ಖಚಿತ ಎಂಬುದನ್ನು ಒತ್ತಿ ಹೇಳುತ್ತಿವೆ. ಇವರೇ ಕೋವಿಡ್ ಸಂಭಾವ್ಯ ಮೂರನೇ ಅಲೆಯ ಸೂಪರ್ ಸ್ಪ್ರೆಡರ್ ಗಳಾಗಿದ್ದಾರೆ ಎಂದು ಐಎಂಎ ಆತಂಕ ವ್ಯಕ್ತಪಡಿಸಿದೆ.
ಧಾರ್ಮಿಕ ಯಾತ್ರೆ, ಪ್ರವಾಸೋದ್ಯಮ ಆರಂಭಕ್ಕೆ ಆತುರ ಬೇಡ
ಇದೇ ವೇಳೆ ದೇಶದಲ್ಲಿ ಧಾರ್ಮಿಕ ಯಾತ್ರೆ, ಪ್ರವಾಸೋಧ್ಯಮ ಆರಂಭಕ್ಕೆ ಆತುರ ಬೇಡ ಎಂದು ಸಲಹೆ ನೀಡಿರುವ ಐಎಂಎ, 'ಪ್ರವಾಸೋದ್ಯಮ, ತೀರ್ಥಯಾತ್ರೆಗಳ ಆರಂಭಕ್ಕೆ ಈಗ ಸೂಕ್ತ ಸಮಯವಲ್ಲ.. ಇದಕ್ಕಾಗಿ ಇನ್ನೂ ಒಂದಷ್ಟು ತಿಂಗಳು ಕಾಯಬೇಕಾಗುತ್ತದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಮೂರನೇ ಆರ್ಭಟಿಸುತ್ತಿದೆ. ಈ ಹೊತ್ತಿನಲ್ಲಿ ಧಾರ್ಮಿಕ ಯಾತ್ರೆ, ಪ್ರವಾಸೋಧ್ಯಮದಿಂದ ಅಪಾಯ ಕಟ್ಟಿಟ್ಟಬುತ್ತಿ. ಸೋಂಕು ಪ್ರಸರಣ ಹೆಚ್ಚಳವಾಗುತ್ತದೆ ಎಂದು ಹೇಳಿದೆ.
ಪ್ರತೀಯೊಬ್ಬರ ಜವಾಬ್ದಾರಿ ಇದೆ
ಇದೇ ವೇಳೆ ದೇಶದಲ್ಲಿ ಈ ನಿರ್ಣಾಯಕ ಸಂದರ್ಭದಲ್ಲಿ ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸರ್ಕಾರಗಳು ಮಾತ್ರವಲ್ಲ.. ದೇಶದ ಪ್ರತೀಯೊಬ್ಬ ನಾಗರೀಕನ ಜವಾಬ್ದಾರಿ ಇದೆ. ನಾಗರಿಕರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು.. ಸಾಮಾಜಿಕ ಅಂತರ ಪಾಲನೆ, ಲಸಿಕೆ ತೆಗೆದುಕೊಳ್ಳುವುದು. ಸಾಧ್ಯವಾದಷ್ಟೂ ಮನೆಗಳಲ್ಲಿಯೇ ಇರುವುದು. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವುದು.. ಮಾಸ್ಕ್ ಗಳನ್ನು ಕಡ್ಡಾಯವಾಗಿ ಮತ್ತು ಸೂಕ್ತ ರೀತಿಯಲ್ಲಿ ಧರಿಸುವುದು ಇತ್ಯಾದಿ ನಿಯಮಗಳನ್ನು ಕಡ್ಡಾಯವಾಗಿ ಪಾಲಸಲೇಬೇಕು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಹಲವು ಭಾಗಗಳಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಜನರು ತಮ್ಮ ಮನಸೋ ಇಚ್ಛೆ ತಿರುಗಾಡುತ್ತಿದ್ದಾರೆ. ಯಥೇಚ್ಛ ಜನಸಂದಣಿ ಇರುವ ಕಡೆಗಳಲ್ಲಿ ಸಾಮೂಹಿಕ ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ವ್ಯಾಕ್ಸಿನೇಷನ್ ಇಲ್ಲದ ಜನರನ್ನು ಈ ಸಾಮೂಹಿಕ ಕೂಟಗಳಲ್ಲಿ ಮುಕ್ತವಾಗಿರಲು ಅನುವು ಮಾಡಿಕೊಡುವುದು ತೀರಾ ಅಪಾಯ..ಇವರು ಕೋವಿಡ್ ಮೂರನೇ ಅಲೆಗೆ ಸಂಭಾವ್ಯ ಸೂಪರ್ ಸ್ಪ್ರೆಡರ್‌ಗಳಾಗುವ ಅಪಾಯವಿದೆ ಎಂದು ಅಪಾಯವಿದೆ ಎಂದು ಐಎಂಎ ಹೇಳಿದೆ.
ಕೋವಿಡ್ ನಿಯಮಗಳ ಹೊರತಾಗಿಯೂ ಪುರಿ ರಥಯಾತ್ರೆಯಲ್ಲಿ ಜನಸಾಗರ
ಇನ್ನು ಪುರಿಯಲ್ಲಿ ವಾರ್ಷಿಕ ರಥಯಾತ್ರೆ ವೇಳೆ ಕೋವಿಡ್ ನಿಯಮಗಳ ಹೊರತಾಗಿಯೂ ಲಕ್ಷಾಂತರ ಜನ ಸೇರಿದ್ದರು. ಅಲ್ಲದೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 'ಕನ್ವರ್ ಯಾತ್ರೆ'ಗೆ ಅವಕಾಶ ನೀಡುವ ಸಂಬಂಧ ಸರ್ಕಾರಗಳು ಚರ್ಚೆ ನಡೆಸುತ್ತಿರುವ ಹೊತ್ತಿನಲ್ಲೇ ಐಎಂಎ ಎಚ್ಚರಿಕೆ ಮಹತ್ವ ಪಡೆದುಕೊಂಡಿದೆ.
ಸಾಮೂಹಿಕ ಸಭೆಗಳನ್ನು ನಿಯಂತ್ರಿಸಿ, ಗರಿಷ್ಠ ಲಸಿಕೀಕರಣದೊಂದಿಗೆ 3ನೇ ಅಲೆಯನ್ನು ಧೈರ್ಯದಿಂದ ಹೋರಾಡೋಣ
ಇದೇ ವೇಳೆ ರಾಜ್ಯ ಸರ್ಕಾರಗಳಿಗೆ ಒಂದಷ್ಟು ಸೂಚನೆ ನೀಡಿರುವ ಐಎಂಎ, ಈ ನಿರ್ಣಾಯಕ ಸಂದರ್ಭದಲ್ಲಿ ಸಾಮೂಹಿಕ ಸಭೆಗಳನ್ನು ನಿಯಂತ್ರಿಸುವಂತೆ ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದೆ. ಕೋವಿಡ್ ವೈರಸ್‌ನೊಂದಿಗಿನ ಹೊರಾಟದ ಕೊನೆಯ ಒಂದೂವರೆ ವರ್ಷಗಳ ಅನುಭವ ಮತ್ತು ಉದಯೋನ್ಮುಖ ಸಾಕ್ಷ್ಯಗಳ ಆಧಾರದ ಮೇಲೆ, ಸಾರ್ವತ್ರಿಕ ವ್ಯಾಕ್ಸಿನೇಷನ್ ಅಭಿಯಾನವನ್ನು ಗರಿಷ್ಠ ಸಂಖ್ಯೆಯ ಜನರನ್ನು ತಲುಪುವಂತೆ ಮಾಡುವ ಮೂಲಕ ಮತ್ತು ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ 3ನೇ ಅಲೆಯನ್ನು ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಎದುರಿಸೋಣ. ಗರಿಷ್ಠ ಪ್ರಮಾಣದ ಲಸಿಕೆ ಪಡೆದುಕೊಂಡರೆ ಕೋವಿಡ್ ವೈರಸ್ ನ ಪರಿಣಾಮವನ್ನು ಪರಿಣಾಮಕಾರಿಯಾಗಿ ತಗ್ಗಿಸಬಹುದು ಎಂದು ಹೇಳಿದೆ.
ನೆರೆ ಹೊರೆಯವರೂ ಲಸಿಕೆ ಪಡೆದಿದ್ದಾರೆಯೇ ಮಾಹಿತಿ ಪಡೆಯಿರಿ!
ಅಲ್ಲದೆ 'ಸಾಮೂಹಿಕ ಕೂಟಗಳನ್ನು ತಪ್ಪಿಸುವುದರಿಂದ, ಸಾಮೂಹಿಕ ಕೂಟಗಳ ಆಯೋಜನೆ ತಡೆಯುವುದರಿಂದ ಕೋವಿಡ್‌ನೊಂದಿಗಿನ ರೋಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದರಿಂದ ಉಂಟಾಗುವ ಪರಿಣಾಮಗಳು ಮತ್ತು ಆರ್ಥಿಕತೆಯ ಒತ್ತಡಗಳನ್ನು ನಿಭಾಯಿಸಬಹುದು. ಕೋವಿಡ್ ಆರ್ಥಿಕ ನಷ್ಟಕ್ಕಿಂತ ಇದು ಉತ್ತಮ. ಕನಿಷ್ಠ ಮೂರು ತಿಂಗಳುಗಳವರೆಗೆ ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ನಮ್ಮ ಮನೆಗಳ ಸಮೀಪವಿರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ" ಎಂದು ಹೇಳಿಕೆ ತಿಳಿಸಿದೆ.
Advertisement