ಮದುವೆ 'ಸಂಸ್ಕಾರ' ಕಳೆದುಕೊಂಡು 'ಲಿವ್ ಇನ್ ರಿಲೇಶನ್' ನಂತಾಗಿದೆ: ಮದ್ರಾಸ್ ಹೈಕೋರ್ಟ್
ಚೆನ್ನೈ: ಕೌಟುಂಬಿಕ ಹಿಂಸಾಚಾರ ಕಾಯ್ದೆ 2005 ಜಾರಿಗೆ ತಂದ ನಂತರ 'ಸಂಸ್ಕಾರ' ಎಂಬ ಪದವು ಅರ್ಥವನ್ನು ಕಳೆದುಕೊಂಡಿದೆ ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಮದುವೆ ಎಂಬುದು ಒಪ್ಪಂದವಲ್ಲ, ಅದು ವ್ಯಕ್ತಿಯ ಜೀವನದ ಸಂಸ್ಕಾರದ ಘಟ್ಟ ಎಂದು ಪ್ರಸ್ತುತ ಪೀಳಿಗೆ ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಸರ್ಕಾರಿ ಪಶುವೈದ್ಯರು ತನ್ನ ವಿರುದ್ಧ ಪತ್ನಿ ಹೂಡಿದ್ದ ಕ್ರಿಮಿನಲ್ ಮೊಕದ್ದಮೆಗಳ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಎಸ್ ವೈದ್ಯನಾಥನ್ ಅವರು 'ಮದುವೆ ಒಂದು ಒಪ್ಪಂದವಲ್ಲ, ಆದರೆ ಸಂಸ್ಕಾರದಾಯಕವಾಗಿದೆ ಎಂಬುದನ್ನು ಪ್ರಸ್ತುತ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಸಹಜವಾಗಿ, ಕೌಟುಂಬಿಕ ಹಿಂಸಾಚಾರ ಕಾಯ್ದೆ 2005 ಜಾರಿಗೆ ಬಂದ ನಂತರ 'ಸಂಸ್ಕಾರ' ಎಂಬ ಪದಕ್ಕೆ ಯಾವುದೇ ಅರ್ಥವಿಲ್ಲ. ಲಿವ್ ಇನ್ ಸಂಬಂಧದಂತಾಗಿದೆ. 'ಅಹಂ' ಮತ್ತು 'ಅಸಹಿಷ್ಣುತೆ' ಪಾದರಕ್ಷೆಗಳಂತೆ ಮನೆಯ ಹೊರಗೆ ಬಿಡಬೇಕು ಇಲ್ಲದಿದ್ದರೆ ಮಗು/ ಮಕ್ಕಳು ಜೀವನದಲ್ಲಿ ಶೋಚನೀಯತೆಯನ್ನು ಎದುರಿಸಬೇಕಾಗುತ್ತದೆ.
"ಪ್ರಸ್ತುತ ಪ್ರಕರಣದಲ್ಲಿ, ಪತ್ನಿ ಸಲ್ಲಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಸೇವೆಯಿಂದ ಪಶುವೈದ್ಯರನ್ನು ಅಮಾನತುಗೊಳಿಸಲಾಗಿದೆ. ಅರ್ಜಿದಾರರ ಪ್ರಕಾರ, ಅವರು 2015ರಲ್ಲಿ ಪತ್ನಿ ವಿರುದ್ಧ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದರು. ಕುಟುಂಬ ನ್ಯಾಯಾಲಯವು 2020ರ ಫೆಬ್ರವರಿ 18ರಂದು ವಿಚ್ಛೇದನ ಅರ್ಜಿಯನ್ನು ಸಹ ಅನುಮತಿಸಿತು.
ಆದಾಗ್ಯೂ, ತೀರ್ಪಿಗೂ ಕೇವಲ ನಾಲ್ಕು ದಿನಗಳ ಮುನ್ನ ಅವರ ಪತ್ನಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದರಿಂದ ಸೇವೆಯಿಂದ ತನ್ನನ್ನು ಅಮಾನತುಗೊಳಿಸಲು ಕಾರಣವಾಯಿತು. ದೂರಿನ ಸಮಯವನ್ನು ಗಮನಿಸಿದ ನ್ಯಾಯಾಧೀಶರು 'ವಿಚ್ಛೇದನ ಆದೇಶವನ್ನು ನಿರೀಕ್ಷಿಸಿ ಅರ್ಜಿದಾರರಿಗೆ ಅನಗತ್ಯ ತೊಂದರೆ ಉಂಟು ಮಾಡಲು ಈ ಕೌಟುಂಬಿಕ ಹಿಂಸಾಚಾರ ಕಾಯ್ದೆಯನ್ನು ಬಳಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲದೆ "ದುರದೃಷ್ಟವಶಾತ್ ಅಂದರೆ ಗಂಡನಿಗೆ ಹೆಂಡತಿಯ ವಿರುದ್ಧ ಮುಂದುವರಿಯಲು ಕೌಟುಂಬಿಕ ಹಿಂಸಾಚಾರ ಕಾಯ್ದೆಯಂತಹ ಯಾವುದೇ ಅವಕಾಶವಿಲ್ಲ ಎಂದರು.
ಸದ್ಯ ನ್ಯಾಯಾಲಯವು ಅಮಾನತು ಆದೇಶವನ್ನು ರದ್ದುಪಡಿಸಿ, ಅರ್ಜಿದಾರರನ್ನು 15 ದಿನಗಳಲ್ಲಿ ಸೇವೆಯಲ್ಲಿ ಪುನಃ ನೇಮಿಸುವಂತೆ ಇಲಾಖೆಗೆ ನಿರ್ದೇಶಿಸಿದೆ.


