ತಗ್ಗಿದ ಕೋವಿಡ್ ಅಬ್ಬರ: ಅನ್ ಲಾಕ್ ಪ್ರಕ್ರಿಯೆ ಆರಂಭ, ಕರ್ನಾಟಕದ ಅನ್ ಲಾಕ್ ಭವಿಷ್ಯ ಇಂದು ನಿರ್ಧಾರ?

ದೇಶಾದ್ಯಂತ ಮಾರಕ ಕೊರೋನಾ ವೈರಸ್ 2ನೇ ಅಲೆಯ ಅಬ್ಬರ ಗಣನೀಯವಾಗಿ ತಗ್ಗಿದ್ದು, ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಮೊರೆ ಹೋಗಿದ್ದ ಹಲವು ರಾಜ್ಯಗಳು ಇಂದಿನಿಂದ ಹಂತಹಂತವಾಗಿ ಅನ್ ಲಾಕ್ ಮಾಡಲು ನಿರ್ಧರಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶಾದ್ಯಂತ ಮಾರಕ ಕೊರೋನಾ ವೈರಸ್ 2ನೇ ಅಲೆಯ ಅಬ್ಬರ ಗಣನೀಯವಾಗಿ ತಗ್ಗಿದ್ದು, ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಮೊರೆ ಹೋಗಿದ್ದ ಹಲವು ರಾಜ್ಯಗಳು ಇಂದಿನಿಂದ ಹಂತಹಂತವಾಗಿ ಅನ್ ಲಾಕ್ ಮಾಡಲು ನಿರ್ಧರಿಸಿವೆ.

ಪ್ರಮುಖವಾಗಿ ದೇಶದ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ದೆಹಲಿಯಲ್ಲಿ 'ಅನ್ ಲಾಕ್' ಯೋಜನೆಗೆ ಪ್ರೋತ್ಸಾಹ ನೀಡುವ ಭಾಗವಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಗರದ ಮಾರುಕಟ್ಟೆಗಳನ್ನು ಸಮ-ಬೆಸ ನಿಯಮದ ಆಧಾರದಲ್ಲಿ ತೆರೆಯಲು  ಅನುಮತಿಸಿದ್ದಾರೆ. ಇಂದಿನಿಂದ ಸಮಬೆಸ ಆಧಾರದ ಮೇಲೆ ಮಾರುಕಟ್ಟೆ ಮತ್ತು ಅಂಗಡಿಗಳನ್ನು ಪ್ರತಿದಿನ ತೆರೆಯಲು ಅನುಮತಿಸಲಾಗುತ್ತದೆ. ಮಾಲ್ ಗಳು ಹಾಗೂ ಶಾಪಿಂಗ್ ಸೆಂಟರ್ ಗಳನ್ನೂ ಕೂಡ ಸಮ-ಬೆಸ ಆಧಾರದಲ್ಲಿ ತೆರೆಯಲ್ಪಡುತ್ತವೆ.

ಇನ್ನು ದೇಶದಲ್ಲಿ ಕೋವಿಡ್-19 ಹಾಟ್ ಸ್ಪಾಟ್ ಎಂಬ ಕುಖ್ಯಾತಿಗೆ ಕಾರಣವಾಗಿದ್ದ ಮಹಾರಾಷ್ಟ್ರದಲ್ಲೂ ಇಂದಿನಿಂದ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು, ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು, ಲಾಕ್‌ಡೌನ್‌ ಮತ್ತು ನಾಕ್‌ಡೌನ್‌ಗಳನ್ನು ನಾನು ಬಯಸುವುದಿಲ್ಲ. ಆದರೆ,  ಕೋವಿಡ್ ಮಾರ್ಗಸೂಚಿಗಳನ್ನು ಮತ್ತು ಸಲಹೆಗಳನ್ನು ನಾವು ಪಾಲಿಸಬೇಕು ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸುತ್ತಿರುವ ಬೆನ್ನಲ್ಲೇ, ಕೈಗಾರಿಕೋದ್ಯಮಿಗಳು, ಟಿವಿ ಮತ್ತು ಸಿನಿಮಾ ನಿರ್ಮಾಪಕರ ಜತೆ ಸಭೆಗಳನ್ನು ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಅನ್‌ಲಾಕ್ ಪ್ರಕ್ರಿಯೆಯ ಸಂದರ್ಭ ಜನತೆ ಎಚ್ಚರಿಕೆಯಿಂದ ಇರಬೇಕಿದೆ. ತಕ್ಷಣವೇ ಯಾವುದನ್ನೂ ಸಡಿಲಗೊಳಿಸುವಂತಿಲ್ಲ. ಕೆಲವು ಮಾನದಂಡಗಳು ಮತ್ತು ಹಂತಗಳನ್ನು ನಿಗದಿಪಡಿಸಲಾಗಿದೆ. ನಿರ್ಬಂಧಗಳನ್ನು ಬಿಗಿಗೊಳಿಸಬೇಕೇ ಅಥವಾ ಸಡಿಲಗೊಳಿಸಬೇಕೇ ಎಂಬುದನ್ನು ಸ್ಥಳೀಯಾಡಳಿತಗಳು ನಿರ್ಧರಿಸಲಿವೆ.  ಕೋವಿಡ್ ಮೂರನೇ ಅಲೆಯ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಕೈಗಾರಿಕಾ ಉತ್ಪಾದನೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ‘ಅನ್‌ಲಾಕ್ 2.0’ ಇಂದಿನಿಂದ ಜಾರಿಗೆ ಬರಲಿದ್ದು, ಸೋಂಕು ದೃಢೀಕರಣ ಪ್ರಮಾಣ ಮತ್ತು ಆಮ್ಲಜನಕ ಹಾಸಿಗೆಗಳ  ಲಭ್ಯತೆ ಆಧಾರದಲ್ಲಿ ರಾಜ್ಯವನ್ನು ಐದು ಹಂತಗಳಲ್ಲಿ ವಿಂಗಡಿಸಿ ಲಾಕ್‌ಡೌನ್ ತೆರವು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. 

ಅಂತೆಯೇ ಉತ್ತರ ಪ್ರದೇಶದಲ್ಲೂ ಕೋವಿಡ್ -19 ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, 71 ಜಿಲ್ಲೆಗಳಲ್ಲಿ ಕೋವಿಡ್ ಕಂಟೈನ್ ಮೆಂಟ್ ಝೋನ್ ಗಳನ್ನು ಹೊರತು ಪಡಿಸಿ ಉಳಿದ ಪ್ರದೇಶಗಳಲ್ಲಿ ಕರ್ಫ್ಯೂ ಸಡಿಲಗೊಳಿಸಲಾಗಿದೆ. ವಾರದಲ್ಲಿ ಅಂಗಡಿ ಮುಂಗಟ್ಟುಗಳು, ಕಚೇರಿಗಳು 5 ದಿನ ಕಾರ್ಯಾಚರಣೆ  ನಡೆಸಲು ಅನುಮತಿ ನೀಡಲಾಗಿದೆ. ಇನ್ನು ಈ ಹಿಂದೆ ಜೂನ್ 14 ರವರೆಗೆ ಲಾಕ್‌ಡೌನ್ ವಿಸ್ತರಿಸಿದ್ದ ಸಿಕ್ಕಿಂ ಸರ್ಕಾರ, ದಿನಸಿ ಮತ್ತು ಹಾರ್ಡ್‌ವೇರ್ ಅಂಗಡಿಗಳಿಗೆ ಕೋವಿಡ್-19 ನಿರ್ಬಂಧನೆಗಳಿಂದ ವಿನಾಯಿತಿ ನೀಡಿತ್ತು. ನೆರೆಯ ತಮಿಳುನಾಡಿನಲ್ಲೂ ಜೂನ್ 14ರವರೆಗೂ ಲಾಕ್ ಡೌನ್ ಮುಂದುವರಿಕೆ ಘೋಷಣೆ  ಮಾಡಲಾಗಿದೆಯಾದರೂ ಇಂದಿನಿಂದ ದಿನಬಳಕೆಯ ವಸ್ತುಗಳ ವಿಭಾಗದಲ್ಲಿ ನಿರ್ಬಂಧ ಸಡಿಲಗೊಳಿಸಲಾಗಿದೆ. 

ಹಿಮಾಚಲ ಪ್ರದೇಶ ಮತ್ತು ಗೋವಾ ಕೂಡ 'ಕೊರೋನಾ ಕರ್ಫ್ಯೂ' ಅನ್ನು ಜೂನ್ 14 ರವರೆಗೆ ವಿಸ್ತರಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ತಿಂಗಳ ಕಾಲ 'ಕೊರೋನಾ ಕರ್ಫ್ಯೂ' ಮಾಡಿದ ನಂತರ ಕ್ರಮೇಣ ಅನ್ಲಾಕ್ ಮಾಡುವುದಾಗಿ ಲಡಾಖ್ ಭಾನುವಾರ ಪ್ರಕಟಿಸಿದೆ. 

ಕರ್ನಾಟಕದ ಅನ್ ಲಾಕ್ ಭವಿಷ್ಯ ಇಂದು ನಿರ್ಧಾರ?
ಇನ್ನು ಕರ್ನಾಟಕದ ಅನ್ ಲಾಕ್ ಭವಿಷ್ಯ ಇಂದು ನಿರ್ಧಾರವಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅನ್ ಲಾಕ್ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಕೊರೋನಾ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಕಡೆ ಲಾಕ್ ಡೌನ್ ನ್ನು ಸಡಿಲಿಕೆ ಮಾಡಿ ಅನ್ ಲಾಕ್ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ಪ್ರತಿ ಜಿಲ್ಲೆಗಳ ಕೊರೋನಾ ಸ್ಥಿತಿಗತಿ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಅಂತೆಯೇ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಸುಧಾಕರ್, ಪಾಸಿಟಿವಿಟಿ ರೇಟ್ ಶೇಕಡಾ 5ಕ್ಕಿಂತ ಕಡಿಮೆಯಾದ ಜಿಲ್ಲೆಗಳಲ್ಲಿ ಹಂತ ಹಂತಕ್ಕೆ ಅನ್ ಲಾಕ್ ಮಾಡುವ ಪ್ರಕ್ರಿಯೆಯನ್ನು ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಕೊರೋನಾ ಸಕ್ರಿಯ ಸೋಂಕಿತರ ಸಂಖ್ಯೆ 5 ಸಾವಿರಕ್ಕೆ ಬಂದರೆ, ಅಥವಾ ಪಾಸಿಟಿವಿಟಿ ದರ ಶೇಕಡಾ 5ಕ್ಕೆ ಇಳಿಕೆಯಾದರೆ ಅನ್ ಲಾಕ್ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಒಲವು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com