ರಾಜಸ್ಥಾನ: ಕೊರೋನಾ ಸೋಂಕಿಗೆ ತಂದೆ ಸಾವು; ದುಃಖ ತಡೆಯಲಾಗದೆ ತಂದೆಯ ಚಿತೆಗೆ ಹಾರಿದ ಪುತ್ರಿ!
ಬಾರ್ಮರ್: ಕೊರೋನಾದಿಂದ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ದುಃಖ ತಡೆಯಲಾಗದ ಪುತ್ರಿ ಚಿತೆಗೆ ಹಾರಿರುವ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.
ದಾಮೋದರ್ ದಾಸ್ ಶಾರ್ದಾ (73) ಎಂಬುವವರು ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ದಾಮೋದರ್ ದಾಸ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ನಿನ್ನೆ ಅಂತ್ಯ ಕ್ರಿಯೆ ನಡೆಸುವ ವೇಳೆ ದಾಮೋದರ್ ಅವರ ಕಿರಿಯ ಪುತ್ರಿ ಚಂದ್ರಾ ಶಾರ್ದಾ (34) ಎಂಬುವವರು ದುಃಖ ತಡೆಯಲಾರದೆ ಇದ್ದಕ್ಕಿದ್ದಂತೆ ಚಿತೆಗೆ ಹಾರಿದ್ದಾರೆಂದು ತಿಳಿದುಬಂದಿದೆ.
ಬಳಿಕ ಸ್ಥಳದಲ್ಲಿದ್ದ ಜನರು ಕೂಡಲೇ ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಂದ್ರಾ ಅವರ ದೇಹ ಶೇ.70ರಷ್ಟು ಸುಟ್ಟು ಹೋಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ದಾಮೋದರ್ ದಾಸ್ ಅವರಿಗೆ ಮೂವರು ಪುತ್ರಿಯರಿದ್ದು, ಇವರ ಪತ್ನಿ ಕೆಲ ದಿನಗಳ ಹಿಂದಷ್ಟೇ ನಿಧನ ಹೊಂದಿದ್ದರು. ತಂದೆಯ ಅಂತ್ಯಕ್ರಿಯೆಗೆ ಹೋಗಲೇಬೇಕೆಂದು ದಾಮೋದರ್ ದಾಸ್ ಅವರ ಕಿರಿಯ ಪುತ್ರಿ ಹಠ ಹಿಡಿದ್ದಳು. ಇದರಂತೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಅಂತ್ಯಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಇದ್ದಕ್ಕಿದ್ದಂತೆಯೇ ಚಿತೆಗೆ ಹಾರಿದ್ದಳು ಎಂದು ಅಧಿಕಾರಿ ಪ್ರೇಮ್ ಪ್ರಕಾಶ್ ಎಂಬುವವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ