ನವದೆಹಲಿ: ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮರಾಠರಿಗೆ ಶೇ.50 ರಷ್ಟು ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರ ನಿರ್ಧಾರವನ್ನು ಅಸಂವಿಧಾನಿಕ ಎಂದಿರುವ ಸುಪ್ರೀಂ ಕೋರ್ಟ್, ಕಾನೂನನ್ನು ಬುಧವಾರ ಅಸಿಂಧುಗೊಳಿಸಿದೆ.
2018ರಲ್ಲಿ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಕಾಯ್ದೆ ಜಾರಿಗೆ ತಂದಿತು. ಅದರಂತೆ, ಮಹಾರಾಷ್ಟ್ರದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಉದ್ಯೋಗಿಗಳಲ್ಲಿ ಮರಾಠ ಸಮುದಾಯಕ್ಕೆ ಶೇ. 16ರಷ್ಟು ಮೀಸಲಾತಿ ಒದಗಿಸಿತ್ತು. ಬಾಂಬೆ ಹೈಕೋರ್ಟ್ ಕೂಡ ಈ ಕಾಯ್ದೆಯ ಸಿಂಧುತ್ವವನ್ನ ಎತ್ತಿ ಹಿಡಿಯಿತಾದರೂ ಮರಾಠ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 12 ಮತ್ತು ಸರ್ಕಾರಿ ಉದ್ಯೋಗಿಗಳಲ್ಲಿ ಶೇ. 13 ಮೀಸಲಾತಿ ಮಾತ್ರ ಸಾಕು ಎಂದು ತೀರ್ಪು ಕೊಟ್ಟಿತು.
ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಮತ್ತು ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾದವು. 2019ರಲ್ಲಿ ಸುಪ್ರೀಂ ಕೋರ್ಟ್ ಈ ಕಾನೂನು ಜಾರಿಗೆ ತಡೆ ತಂದಿತು. 2021ರ ಮಾರ್ಚ್ ತಿಂಗಳಲ್ಲಿ ಐವರು ಸದಸ್ಯರ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿತು.
ಇದೀಗ 1992ರಲ್ಲಿ ಮೀಸಲಾತಿ ಶೇ. 50ಕ್ಕೆ ಮಿತಿಯಾಗಬೇಕೆಂದು ನೀಡಿದ್ದ ತೀರ್ಪನ್ನು ಮಾನದಂಡವಾಗಿರಿಸಿಕೊಂಡು ಇವತ್ತು ಸರ್ವೋಚ್ಚ ನ್ಯಾಯಪೀಠ ತೀರ್ಪು ನೀಡಿದೆ.
ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡುವುದು ಕಾನೂನಿನ ಪ್ರಕಾರ ಸರಿಯಲ್ಲ. ಇದು ಅಸಂವಿಧಾನಿಕವಾದದ್ದು. ಒಟ್ಟಾರೆ ಮೀಸಲಾತಿ ಶೇ. 50ಕ್ಕಿಂತ ಹೆಚ್ಚು ಇರುವಂತಿಲ್ಲ. ಮರಾಠಗರಿಗೆ ಮೀಸಲಾತಿ ಕೊಟ್ಟರೆ ಮೀಸಲಾತಿ ಪ್ರಮಾಣ ಶೇ. 50 ಮೀರುತ್ತದೆ. ಇದರಿಂದ ಸಮಾನತೆ ತತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಐವರು ಸದಸ್ಯರ ಸಾಂವಿಧಾನಿಕ ಸುಪ್ರೀಂ ನ್ಯಾಯಪೀಠ ಹೇಳಿದೆ.
ನ್ಯಾ| ಅಶೋಕ್ ಭೂಷಣ್ ನೇತೃತ್ವದ ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರಿದ್ದಾರೆ.
1992ರಲ್ಲಿ ಮಂಡಲ್ ಆಯೋಗದ ಪ್ರಕರಣ ಎಂದು ಖ್ಯಾತವಾಗಿದ್ದ ಇಂದ್ರಾ ಸಾಹನಿ ಪ್ರಕರಣದಲ್ಲಿ ಆಗಿನ 9 ಸದಸ್ಯರ ಸಾಂವಿಧಾನಿಕ ಸುಪ್ರೀಂ ನ್ಯಾಯಪೀಠ ಮೀಸಲಾತಿ ಶೇ. 50ಕ್ಕಿಂತ ಹೆಚ್ಚು ಇರಬಾರದು ಎಂದು ಮಹತ್ವದ ತೀರ್ಪು ನೀಡಿತ್ತು. ಆ ತೀರ್ಪನ್ನು ಆಧಾರವಾಗಿಟ್ಟುಕೊಂಡು ಇಂದು ಸರ್ವೋಚ್ಚ ನ್ಯಾಯಾಲಯವು ಮರಾಠ ಮೀಸಲಾತಿಯ ಸಿಂಧುತ್ವವನ್ನು ಪ್ರಶ್ನಿಸಿ ನಿರ್ಧಾರವನ್ನು ರದ್ದುಗೊಳಿಸಿದೆ.
Advertisement