ಮಾವೋ ಕ್ಯಾಂಪ್ ನಲ್ಲಿ ಕೋವಿಡ್-19 ಉಲ್ಬಣ; 8 ಸಾವು: ಸೋಂಕು ಭೀತಿಯಿಂದಾಗಿ ತಂಡವನ್ನೇ ತೊರೆಯುತ್ತಿರುವ ನಕ್ಸಲರು!

ನಕ್ಸಲ್ ಪೀಡಿತ ಛತ್ತೀಸ್ ಘಡದ ಮಾವೋ ಕ್ಯಾಂಪ್ ನಲ್ಲಿ ಕೊರೋನಾ ಸೋಂಕು ಸಾಂಕ್ರಾಮಿಕ ಉಲ್ಬಣವಾಗಿದ್ದು, ಸೋಂಕಿಗೆ ತುತ್ತಾಗಿ 8 ಮಂದಿ ಸಾವಿಗೀಡಾದ ಹಿನ್ನಲೆಯಲ್ಲಿ ಹಲವು ನಕ್ಸಲರು ತಮ್ಮ ತಂಡವನ್ನು ತೊರೆದು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬಸ್ತಾರ್: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ಕೋವಿಡ್ ಸೋಂಕು ಸಾಂಕ್ರಾಮಿಕ ಉಲ್ಬಣ ಜನಸಾಮಾನ್ಯರನ್ನು ಮಾತ್ರವಲ್ಲದೇ ನಕ್ಸಲರನ್ನೂ ಹೈರಣಾಗಿಸಿದ್ದು, ಮಾವೋ ಕ್ಯಾಂಪ್ ನಲ್ಲಿ ಕೊರೋನಾ ಸೋಂಕು ಸಾಂಕ್ರಾಮಿಕ ಉಲ್ಬಣವಾಗಿದ್ದು, ಸೋಂಕಿಗೆ ತುತ್ತಾಗಿ 8 ಮಂದಿ ಸಾವಿಗೀಡಾದ ಹಿನ್ನಲೆಯಲ್ಲಿ ಹಲವು  ನಕ್ಸಲರು ತಮ್ಮ ತಂಡವನ್ನು ತೊರೆದು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಛತ್ತೀಸ್ ಘಡ ಬಸ್ತಾರ್ ಪ್ರಾಂತ್ಯದಲ್ಲಿ ನಕ್ಸಲರ ಕ್ಯಾಂಪ್ ನಲ್ಲಿ ಕೋವಿಡ್ ಸೋಂಕು ಉಲ್ಬಣವಾಗಿದ್ದು, ಹಲವು ಹಿರಿಯ ಮಾವೋ ನಾಯಕರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಅಂತೆಯೇ ತಂಡದ ಇತರರಿಗೂ ಸೋಂಕು ಒಕ್ಕರಿಸಿದ್ದು, ಸೂಕ್ತ ಚಿಕಿತ್ಸೆ ಸಿಗದೇ ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಈ ಬಗ್ಗೆ  ಮಾಹಿತಿ ನೀಡಿರುವ ಬಸ್ತಾರ್ ಐಜಿ ಸುಂದರ್ ರಾಜ್ ಪಿ ಅವರು, 'ದಕ್ಷಿಣ ಬಸ್ತಾರ್‌ನ ಅರಣ್ಯ ಪ್ರದೇಶಗಳಲ್ಲಿ ಅವಿತಿರುವ ನೂರಾರು ನಕ್ಸಲರು ಸೋಂಕಿಗೆ ತುತ್ತಾಗಿದ್ದಾರೆ. ಅಂತೆಯೇ 8 ರಿಂದ 10 ಮಂದಿ ನಕ್ಸಲರು ಸೋಂಕಿನಿಂದಾಗಿ ಸಾವನ್ನಪ್ಪಿದ್ದು, ಇದು ಮಾವೋವಾದಿ ಶಿಬಿರಗಳಲ್ಲಿ ಭೀತಿ ಸೃಷ್ಟಿ ಮಾಡಿದೆ. ಹಲವು  ನಕ್ಸಲರು ಸೋಂಕಿನ ಭೀತಿಯಿಂದಾಗಿ ತಂಡ ತೊರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ನಕ್ಸಲ್ ನಾಯಕಿಯೊಬ್ಬರು ತಮ್ಮ ಸಹಚರರಿಗೆ ಬರೆದಿರುವ ಪತ್ರವೊಂದು ದೊರೆತಿದ್ದು, ಮಹಿಳಾ ಮಾವೋ ನಾಯಕಿಬ್ಬರು ಗೊಂಡಿ ಭಾಷೆಯಲ್ಲಿ ಈ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಪತ್ರದಲ್ಲಿ 'ದಕ್ಷಿಣ ಬಸ್ತಾರ್ ನ ಡರ್ಭಾ, ಪಶ್ಚಿಮ ಬಸ್ತಾರ್ ಪ್ರಾಂತ್ಯಗಳಲ್ಲಿನ ಹಲವು ನಕ್ಸಲರು ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಚೇತ್ನಾ ನಾಡ್ಯ ಮಂಡಲಿ (ನಕ್ಸಲರ ಸಾಂಸ್ಕ್ರತಿಕ ವಿಭಾಗ) ಮತ್ತು ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿಯ ಸುಮಾರು 7 ರಿಂದ 8 ಮಂದಿ ಕಾಮ್ರೇಡ್ ಗಳು ಸೋಂಕಿಗೆ ಬಲಿಯಾಗಿದ್ದಾರೆ. ಮೂರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ವೇಗವಾಗಿ ಹರಡುತ್ತಿದೆ. ಪ್ರಮುಖವಾಗಿ ವಯಸ್ಸಾದವರ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಬೇಕು. ಕಳೆದ ವಲಯ ಸಭೆಯಲ್ಲಿ, ನಾನು ಎಲ್ಲರನ್ನೂ ಎಚ್ಚರಿಸಲು ಪ್ರಯತ್ನಿಸಿದ್ದೆ, ಆದರೆ ಹಿರಿಯ ವಲಯ ಸದಸ್ಯರು ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಾನು ಇದೇ ವಿಚಾರವಾಗಿ ವಿಕಾಸ್ ದಾದಾ ಅವರೊಂದಿಗೆ ಚರ್ಚೆ ನಡೆಸಿದ್ದೆ ಎಂಬುದು ನಿಮಗೆ ನಿನಪಿನಲ್ಲಿರಬೇಕು. ವಲಯ ಸದಸ್ಯರು ಸರಿಯಾದ ಮಾಹಿತಿಯನ್ನು ಕಾರ್ಯಕರ್ತರಿಗೆ ನೀಡುತ್ತಿಲ್ಲ. ಪ್ರತಿದಿನ ಹಲವಾರು ಸಾವಿರ ಜನರ ಸಾವಿನ ಬಗ್ಗೆ ಸುದ್ದಿಗಳ ಮೂಲಕ ನಾವು ಕೇಳುತ್ತಿದ್ದೇವೆ. ನಾವು ಜೀವಂತವಾಗಿದ್ದರೆ, ಆಗ ಮಾತ್ರ ನಾವು ಕ್ರಾಂತಿಯನ್ನು ಮುಂದೆ ಸಾಗಿಸಬಹುದು ಎಂದು ಪತ್ರದಲ್ಲಿ ಹೇಳಿದ್ದಾರೆ ಎಂದು ಹೇಳಲಾಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ದಂತೇವಾಡ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ಅವರು ನಕ್ಸಲರ ಸಾವನ್ನು ಖಚಿತಪಡಿಸಿದ್ದಾರೆ. ಸುಮಾರು 400 ಮಾವೋವಾದಿಗಳು ಈವರೆಗೆ ಕಾಡಿನಲ್ಲಿ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ನಕ್ಸಲರು 20 ದಿನಗಳ ಹಿಂದೆ ಸುಕ್ಮಾ ಮತ್ತು ಬಿಜಾಪುರ ಅರಣ್ಯ  ಪ್ರದೇಶಗಳ ನಡುವೆ ಬೃಹತ್ ರ್ಯಾಲಿ ನಡೆಸಿದ್ದರು. 500ಕ್ಕೂ ಹೆಚ್ಚು ಮಾವೋವಾದಿಗಳು ಇದರಲ್ಲಿ ಭಾಗವಹಿಸಿದ್ದರು. ಮಾವೋವಾದಿಗಳಲ್ಲಿ ಕೋವಿಡ್ ಸೋಂಕು ಪ್ರಸರಣವಾಗಲು ಈ ಸಭೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಮತ್ತೊಂದೆಡೆ, ನಕ್ಸಲರ ಸಭೆಗಳು ಇನ್ನೂ ಅರಣ್ಯ ಪ್ರದೇಶಗಳ ಸಮೀಪದಲ್ಲಿರುವ ಹಳ್ಳಿಗಳಲ್ಲಿ ನಡೆಯುತ್ತಿವೆ. ಈ ಗ್ರಾಮದಲ್ಲಿ ಸುಮಾರು 2 ಲಕ್ಷ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಅವರಿಗೂ ವೈರಸ್ ಸೋಂಕು ತಗಲುವು ಭೀತಿ ಇದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಕಳೆದ ಕೆಲವು ದಿನಗಳಿಂದ ಛತ್ತೀಸ್‌ಗಡದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ, 11,867 ಹೊಸ ಪ್ರಕರಣಗಳು ವರದಿಯಾಗಿದ್ದು, 172  ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ  8,63,343 ಏರಿಕೆಯಾಗಿದೆ. ಅಂತೆಯೇ 10,742ಸೋಂಕಿತರು ವೈರಸ್‌ಗೆ ಬಲಿಯಾಗಿದ್ದಾರೆ. 7.27 ಲಕ್ಷ ಜನರು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 1,25,104 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com