
ನವದೆಹಲಿ: ಮಹಾಮಾರಿ ಕೊರೋನಾ ಹೊಸ ತಳಿ B.1.1.529 ವೈರಸ್ ಜಗತ್ತಿನ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೆಲ ನಿರ್ದಿಷ್ಟ ದೇಶಗಳಿಂದ ಆಗಮಿಸುವವರಿಗೆ ಟೆಸ್ಟ್ ಕಡ್ಡಾಯಗೊಳಿಸಿದೆ.
ಐರೋಪ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಸಿಂಗಾಪುರ, ಹಾಂಗ್‌ಕಾಂಗ್, ಇಸ್ರೆಲ್‌ನಿಂದ ಭಾರತಕ್ಕೆ ಬರುವವರಿಗೆ ಕೊವೀಡ್ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮ ಅನುಸರಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಕೋವಿಡ್ ಲಸಿಕೆ ಅಭಿಯಾನದ ನಂತರ ಎಲ್ಲರೂ ನಿರ್ಭೀತರಾಗಿ ಓಡಾಡುವ ದಿನಗಳು ಸಮೀಪಿಸಿತು ಎನ್ನುವಾಗಲೇ ಇದೀಗ ಕೊರೊನಾ ರೂಪಾಂತರಿ ಸೋಂಕುಗಳ ಹಾವಳಿ ಶುರುವಾಗಿದೆ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ಸೋಂಕಿನ ಹೊಸ ತಳಿ ಭಾರೀ ಅಪಾಯಕಾರಿಯಾಗಿದೆ.
ಈ ರೂಪಾಂತರಿ ವೈರಸ್ ಡೆಲ್ಟಾ ವೈರಸ್ಗಿಂತಲೂ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ದಕ್ಷಿಣ ಆಫ್ರಿಕಾ, ಹಾಂಕಾಂಗ್ ಮತ್ತು ಬೋಟ್ಸ್ವಾನಾ ದೇಶಗಳಿಂದ ಬರುವ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆಗೆ ಒಳಪಡಿಸುವಂತೆ ನಿನ್ನೆ ಆದೇಶ ಹೊರಡಿಸಿತ್ತು.
ಕೋವಿಡ್ ಸೋಂಕಿನಲ್ಲಿ ಈವರೆಗಿನ ಎಲ್ಲಾ ರೂಪಾಂತರಿಗಳಿಗಿಂತಲೂ ಭಿನ್ನವಾದ, ತತಕ್ಷಣಕ್ಕೆ ಹಾಗೂ ವೇಗವಾಗಿ ಪ್ರಸರಿಸುವ ಹೊಸ ರೂಪಾಂತರಿ ಕೊರೊನಾ ದಕ್ಷಿಣ ಆಫ್ರಿಕಾ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದು, ಮುಜಾಂಗ್ರತೆಗಾಗಿ ವಿಶ್ವಸಂಸ್ಥೆ ತುರ್ತು ಸಭೆ ಕರೆದಿದೆ.
Advertisement