ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಅವ್ಯಾಹತ ಮಳೆ: ತಗ್ಗು ಪ್ರದೇಶಗಳು ಜಲಾವೃತ
ನೆಲ್ಲೂರು: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಜನತೆಗೆ ಮಳೆಯಿಂದ ಸದ್ಯಕ್ಕೆ ಮುಕ್ತಿ ಸಿಗುವ ಹಾಗೆ ಕಾಣುತ್ತಿಲ್ಲ. ನಿನ್ನೆಯಿಂದ ನೆಲ್ಲೂರು ನಗರ ಮತ್ತು ಹಲವು ಭಾಗಗಳಲ್ಲಿ ಮಳೆ ಅವ್ಯಾಹತವಾಗಿ ಸುರಿಯುತ್ತಿದೆ.
ಇಂದು ಬೆಳಗ್ಗೆ 8.30ರವರೆಗೆ ಕಳೆದ 24 ಗಂಟೆಗಳಲ್ಲಿ ಬುಚ್ಚಿರೆಡ್ಡಿಪಾಲೆಂ ಮತ್ತು ಆತ್ಮಕೂರು ಭಾಗದಲ್ಲಿ ಅತಿ ಹೆಚ್ಚು 14 ಸೆಂ.ಮೀ ಮತ್ತು 10 ಸೆಂ.ಮೀ ಮಳೆಯಾಗಿದೆ.ಕೋವೂರು, ಸಂಗಮ, ವಿಡವಲೂರು ಭಾಗದಲ್ಲಿ 9 ಸೆಂ.ಮೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ನೆಲ್ಲೂರು ನಗರದ ತಗ್ಗು ಪ್ರದೇಶಗಳು, ವಿಶೇಷವಾಗಿ ಜನಾರ್ದನರೆಡ್ಡಿ ಮತ್ತು ಭಗತ್ ಸಿಂಗ್ ಕಾಲೋನಿಗಳು ಮಳೆ ನೀರಿನಿಂದ ಜಲಾವೃತವಾಗಿವೆ.ಆತ್ಮಕೂರಿನ ಹೊರವಲಯದಲ್ಲಿರುವ ಕಾಲೋನಿಗಳೂ ಮಳೆ ನೀರಿನಿಂದ ಜಲಾವೃತವಾಗಿವೆ.
ಜಿಲ್ಲೆಯ ಪ್ರಮುಖ ಜಲಮೂಲವಾದ ಸೋಮಶಿಲಾ ಯೋಜನೆಗೆ 45,176 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಅಧಿಕಾರಿಗಳು 45,255 ಕ್ಯೂಸೆಕ್ ನೀರನ್ನು ಹೊರಗೆ ಬಿಡುತ್ತಿದ್ದಾರೆ.
ಚಿತ್ತೂರು ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಸತ್ಯವೇಡಲ್ಲಿ 5 ಸೆಂ.ಮೀ ಮಳೆಯಾಗಿದೆ. ಕಡಪ ಜಿಲ್ಲೆಯ ಕೆಲವೆಡೆ ಸಾಧಾರಣದಿಂದ ಕೂಡಿದ ಭಾರಿ ಮಳೆಯಾಗುತ್ತಿದೆ. ಸಿ.ಕೆ.ದಿನ್ನೆ, ಮೈದುಕೂರು, ಕಡಪದಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಮತ್ತೊಂದೆಡೆ, ಬಾಲಿವುಡ್ ನಟ ಸೋನು ಸೂದ್ ಅವರ ತಂಡ ನೆಲ್ಲೂರು ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ