ಕೇರಳದಲ್ಲಿ ಭಾರಿ ಮಳೆ: 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, 3 ಸಾವು, 10 ಮಂದಿ ನಾಪತ್ತೆ

ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮುಂದುವರೆದಿದ್ದು, ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆ ಸಂಬಂಧಿತ ಭೂ ಕುಸಿತದಲ್ಲಿ ಮೂರು ಮಂದಿ ಸಾವನ್ನಪ್ಪಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೇರಳದಲ್ಲಿ ಭಾರಿ ಮಳೆ (ಐಎಎನ್ಎಸ್ ಚಿತ್ರ)
ಕೇರಳದಲ್ಲಿ ಭಾರಿ ಮಳೆ (ಐಎಎನ್ಎಸ್ ಚಿತ್ರ)
Updated on

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮುಂದುವರೆದಿದ್ದು, ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆ ಸಂಬಂಧಿತ ಭೂ ಕುಸಿತದಲ್ಲಿ ಮೂರು ಮಂದಿ ಸಾವನ್ನಪ್ಪಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೇರಳದ ದಕ್ಷಿಣ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಅಲ್ಲದೆ ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಈ ಸಂಬಂಧ ಸಾಕಷ್ಟು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಈಗಾಗಲೇ ದಕ್ಷಿಣ ಮತ್ತು ಮಧ್ಯ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಉತ್ತರ ಭಾಗದ ಜಿಲ್ಲೆಗಳಲ್ಲೂ ಇಂದು ಸಂಜೆ ಮಳೆ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣ, ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸಾರ್ವಜನಿಕರು ಜಾಗರೂಕತೆಯಿಂದ ಇರುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ. ಭಾರಿ ಮಳೆಯಾಗುತ್ತಿರುವ ಕಾರಣ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಅಣೆಕಟ್ಟುಗಳು ತುಂಬಿ ಹರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಆಸುಪಾಸಿನಲ್ಲಿ ವಾಸಿಸುತ್ತಿರುವವರು ಅಧಿಕಾರಿಗಳು ನೀಡುವ ಸೂಚನೆಯನ್ನು ಅನುಸರಿಸಲು ಸಿದ್ಧರಿರುವಂತೆ ಮುಖ್ಯಮಂತ್ರಿ ತಿಳಿಸಿದ್ದಾರೆ.

ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಇನ್ನು ಭಾರಿ ಕಾರಣ ಕೇರಳದ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ರಾಜ್ಯದ ಐದು ಜಿಲ್ಲೆಗಳಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಿದೆ. ತಿರುವನಂತಪುರ, ಕೊಲ್ಲಂ, ಅಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇರುವ ಕಾರಣ, ಆ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಪತ್ತನಂತಿಟ್ಟದಲ್ಲಿ ಸುರಿಯುತ್ತಿರುವ ಮಳೆ 2018ರಲ್ಲಿ ಸಂಭವಿಸಿದ್ದ ಭೀಕರ ಪ್ರವಾಹವನ್ನು ನೆನಪಿಸುವಂತೆ ಸುರಿಯುತ್ತಿದೆ. 

ಭೂಕುಸಿತಕ್ಕೆ 3 ಬಲಿ, 10 ಮಂದಿ ನಾಪತ್ತೆ
ಇತ್ತ ಕೇರಳದ ಕೊಟ್ಟಾಯಂನಲ್ಲಿ ಸಂಭವಿಸಿದ ಭೂ ಕುಸಿತ ದುರಂತದಲ್ಲಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೊಟ್ಟಾಯಂನ ಕೂಟ್ಟಿಕಲ್ ಪಂಚಾಯತ್‌ನಲ್ಲಿ ಈ ಭೂಕುಸಿತ ಸಂಭವಿಸಿದ್ದು, ಅಲ್ಲಿದ್ದ 13 ಜನರು ಕಾಣೆಯಾಗಿದ್ದರು. ಇಲ್ಲಿಯವರೆಗೆ ನಜೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಮೂರು ಶವಗಳನ್ನು ಹೊರ ತೆಗೆಯಲಾಗಿದೆ. ಇಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಭಾರತೀಯ ನೌಕಾಪಡೆಯ ಸಹಾಯವನ್ನು ಪಡೆಯಲಾಗಿದೆ.

ಕಾರು ಕೊಚ್ಚಿ ಹೋಗಿ ಬಾಲಕಿ ಸಾವು
ಅಂತೆಯೇ ಮಳೆ ನೀರಿನ ಪ್ರವಾಹದಲ್ಲಿ ಕಾರೊಂದು ಕೊಚ್ಚಿಕೊಂಡು ಹೋಗಿದ್ದು, ಕಾರಿನಲ್ಲಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ. ತೊಡುಪುಳದಲ್ಲಿ ಈ ಘಟನೆ ನಡೆದಿದೆ. 

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಅಣೆಕಟ್ಟುಗಳು ಭರ್ತಿ
ಇನ್ನು ಬಾರಿ ಮಳೆಯಿಂದಾಗಿ ಕೇರಳದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭಾರಿ ಪ್ರಮಾಣದ ನೀರು ಅಣೆಕಟ್ಟುಗಳಿಗೆ ಹರಿಯುತ್ತಿದೆ.  ಕೇರಳದ ಪ್ರಮುಖ ಅಣೆಕಟ್ಟುಗಳು ಈಗಾಗಲೇ ಅವುಗಳ ಸಾಮರ್ಥ್ಯಕ್ಕೆ ತುಂಬಿವೆ. ಹೀಗಾಗಿ ತಿರುವನಂತಪುರಂ ಮತ್ತು ಪತ್ತನಂತಿಟ್ಟದ ಜಿಲ್ಲಾಡಳಿತಗಳು ವಿವಿಧ ಅಣೆಕಟ್ಟುಗಳ ಗೇಟ್ ಗಳನ್ನು ತೆರೆದು ಹೆಚ್ಚುವರಿ ನೀರನ್ನು ಬಿಡುವ ಎಚ್ಚರಿಕೆ ನೀಡಿವೆ. ಹೀಗಾಗಿ ನದಿ ಪಾತ್ರದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯವನ್ನು ಮಾಡಲಾಗುತ್ತಿದೆ. 

ಅಂತೆಯೇ ತಿರುವನಂತಪುರಂನಲ್ಲಿ, ತುರ್ತು ಉದ್ದೇಶಗಳಿಗಾಗಿ ಮಾತ್ರ ಜನರು ತಮ್ಮ ಪ್ರಯಾಣವನ್ನು ಸೀಮಿತಗೊಳಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ನದಿ, ಸಮುದ್ರಕ್ಕೆ ಇಳಿಯದಂತೆ ನಿಷೇಧಿಸಲಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ನೆಯ್ಯಾರ್ ಅಣೆಕಟ್ಟಿನ ನಾಲ್ಕು ಗೇಟ್ ಗಳ 240 ಸೆಂ.ಮೀ ಹೆಚ್ಚಿಸಲಾಗಿದೆ. 

ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ, ಇಡುಕ್ಕಿ, ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಮತ್ತು ಪತ್ತನಂತಿಟ್ಟದಲ್ಲಿ ಅನಾಥೋಡ್ ಅಣೆಕಟ್ಟು ಮತ್ತು ಅದರ ಜಲಾನಯನ ಪ್ರದೇಶದಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.

ಗಿರಿಧಾಮ ಪ್ರವೇಶ ನಿಷೇಧ
ಏತನ್ಮಧ್ಯೆ, ತಿರುವನಂತಪುರಂ ಜಿಲ್ಲಾಧಿಕಾರಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರಸಿದ್ಧ ಪೊನ್ಮುಡಿ ಗಿರಿಧಾಮಕ್ಕೆ ಪ್ರವೇಶವನ್ನು ನಿಷೇಧಿಸಿದ್ದಾರೆ.

ಕಂಟ್ರೋಲ್ ರೂಂ ಸಂಖ್ಯೆ
ಕೇರಳ ಸರ್ಕಾರವು 8606883111, 9562103902, 9447108954, 9400006700 ಸಂಖ್ಯೆಗಳಿಗೆ ಕಂಟ್ರೋಲ್ ರೂಂ, ಕರೆ ಅಥವಾ ವಾಟ್ಸಾಪ್ ಸೇವೆಗಳನ್ನು ತೆರೆದಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com