ಉತ್ತರ ಪ್ರದೇಶ: ಪ್ರಧಾನಿ ಮೋದಿಯಿಂದ 9 ವೈದ್ಯಕೀಯ ಕಾಲೇಜುಗಳ ಉದ್ಘಾಟನೆ

ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಿರುವ 9 ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಉದ್ಘಾಟಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ಲಖನೌ: ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಿರುವ 9 ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಉದ್ಘಾಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಅನಾರೋಗ್ಯ ಕೇವಲ ಬಡವರಿಗೆ ಮಾತ್ರವಲ್ಲ ಯಾರನ್ನು ಬೇಕಾದರೂ ಕಾಡಬಹುದು. ನಮ್ಮ ಡಬಲ್ ಎಂಜಿನ್ ಸರ್ಕಾರವು ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಸಾವಿರಾರು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಡಯಾಲಿಸಿಸ್ ಮತ್ತು ಹೃದ್ರೋಗ ಚಿಕಿತ್ಸೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಉತ್ತರ ಪ್ರದೇಶ ಮಾತ್ರವಲ್ಲ ಇಡೂಈ ದೇಶದಲ್ಲಿ ಹತ್ತಾರು ಅತ್ಯುತ್ತಮ ಆಸ್ಪತ್ರೆಗಳು ನಮ್ಮ ಸರ್ಕಾರ ಆರಂಭಿಸಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬರುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 6 ವೈದ್ಯಕೀಯ ಕಾಲೇಜುಗಳಿದ್ದವು. ಈಗ 16 ಕಾಲೇಜುಗಳಿವೆ. ವೈದ್ಯಕೀಯ ಕಾಲೇಜುಗಳಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುವುದು ಮಾತ್ರವಲ್ಲ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿಯೂ ಸಿಗುತ್ತದೆ. ದುರಾದೃಷ್ಟವಶಾತ್ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ದೂರದೃಷ್ಟಿಯ ಯೋಜನೆಗಳನ್ನೇ ರೂಪಿಸಿರಲಿಲ್ಲ ಎಂದು ಹಿಂದಿನ ಸರ್ಕಾರಗಳ ಬಗ್ಗೆ ದೂರಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವೈದ್ಯಕೀಯ ಕಾಲೇಜುಗಳು ಮಾತ್ರವಲ್ಲ ವೈದ್ಯಕೀಯ ಶಿಕ್ಷಣದ ಸೀಟುಗಳನ್ನೂ ಹೆಚ್ಚಿಸಲಾಗಿದೆ. ಉತ್ತರ ಪ್ರದೇಶದ ಬಡ ಕುಟುಂಬದ ಹೆಣ್ಣುಮಗಳೊಬ್ಬಳು ವೈದ್ಯೆಯಾಗಬೇಕು ಎಂದುಕೊಂಡರೆ ಅದು ಈಗ ಅಸಾಧ್ಯವಲ್ಲ. ಕಳೆದ 7 ವರ್ಷಗಳಲ್ಲಿ 60,000 ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಸೃಜಿಸಲಾಗಿದೆ. ಹೊಸ ತಲೆಮಾರಿನ ಸಾಕಷ್ಟು ವೈದ್ಯರು ಈಗ ವೃತ್ತಿರಂಗ ಪ್ರವೇಶಿಸಿದ್ದಾರೆ. ಅವರ ಸೇವೆಯಿಂದ ದೇಶದ ಜನರ ಆರೋಗ್ಯ ಸುಧಾರಿಸಲಿದೆ ಎಂದು ಮೋದಿ ತಿಳಿಸಿದರು.

ಹಿಂದಿ ಜೊತೆಗೆ ಹಲವು ಭಾರತೀಯ ಭಾಷೆಗಳಲ್ಲಿಯೂ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಸಿಗಲಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವಂತೆ ಆಗಬೇಕು ಎನ್ನುವುದು ನಮ್ಮ ಸರ್ಕಾರದ ನೀತಿ. ಉತ್ತರ ಪ್ರದೇಶದಲ್ಲಿ ಕೊರೊನಾ ಸಂದರ್ಭದಲ್ಲಿಯೂ ಸಾಕಷ್ಟು ಸಾಧನೆಗಳು ಆಗಿವೆ ಎಂದು ಹೇಳಿದರು.

ಉತ್ತರ ಪ್ರದೇಶದ ಪ್ರತಿ ಜಿಲ್ಲೆಯಲ್ಲಿಯೂ ಕೊರೊನಾ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೊರೊನಾ ಲಸಿಕೆ ನೀಡಿಕೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಲು ಉತ್ತರ ಪ್ರದೇಶದ ಕೊಡುಗೆ ದೊಡ್ಡದು. ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್ ಜೊತೆಗೆ ಸಬ್​ ಕಾ ಪ್ರಯಾಸ್ (ಎಲ್ಲರ ಜೊತೆಗೆ, ಎಲ್ಲರ ವಿಕಾಸ ಮತ್ತು ಎಲ್ಲರ ಪರಿಶ್ರಮ) ಸಹ ಅಗತ್ಯ ಎಂದು ಮೋದಿ ಹೇಳಿದರು. ಈವರೆಗೆ ಸಬ್​ ಕಾ ಸಾಥ್-ಸಬ್​ ಕಾ ವಿಕಾಸ್ ಎಂದಷ್ಟೇ ಹೇಳುತ್ತಿದ್ದ ಮೋದಿ ಇದೀಗ ಸಬ್​ ಕಾ ಪ್ರಯಾಸ್ ಎಂದು ಹೊಸ ಪದಗುಚ್ಛವನ್ನು ಜೋಡಿಸಿದ್ದು ಜನರ ಗಮನಸೆಳೆಯಿತು. ಜನರು ಈ ಘೋಷಣೆಯನ್ನು ಪುನರುಚ್ಚರಿಸಿ ಬೆಂಬಲಿಸಿದರು.

ಉತ್ತರ ಪ್ರದೇಶದಲ್ಲಿ 9 ಹೊಸ ವೈದ್ಯಕೀಯ ಕಾಲೇಜುಗಳ ಮೂಲಕ 2,500 ಹಾಸಿಗೆಳ ಆಸ್ಪತ್ರೆಗಳು ಆರಂಭವಾಗಲಿವೆ. ಸುಮಾರು 5000 ಮಂದಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವೃತ್ತಿಪರ ತರಬೇತಿ ಸಿಗಲಿದೆ. ಯೋಗಿ ಆದಿತ್ಯನಾಥ್ ಅಧಿಕಾರ ಅವಧಿಯಲ್ಲಿ ಉತ್ತರ ಪ್ರದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ತಿಳಿಸಿದರು.

ಸಿದ್ಧಾರ್ಥನಗರ, ಇಟಾ, ಹರ್ದೋಯಿ, ಪ್ರತಾಪಗಡ, ಫತೇಪುರ, ದೆರಾಯ್, ಘಾಜಿಪುರ, ಮಿರ್ಝಾಪುರ ಮತ್ತು ಜೌನ್​ಪುರ್​ ಜಿಲ್ಲೆಗಳಲ್ಲಿ ಈ ಹೊಸ 9 ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com