ಜಾಮೀನು ಆದೇಶ ರವಾನೆ ವಿಳಂಬ: ಜೈಲುಗಳಲ್ಲಿ ವೇಗದ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ಜೈಲಿಗೆ ನ್ಯಾಯಾಲಯಗಳಿಂದ ಜಾಮೀನು ಆದೇಶಗಳನ್ನು ತಡೆರಹಿತವಾಗಿ ವರ್ಗಾಯಿಸಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜೈಲಿನಲ್ಲಿ ಸಾಕಷ್ಟು ವೇಗದ ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಪರಪ್ಪನ ಅಗ್ರಹಾರ ಕಾರಾಗೃಹ
ಪರಪ್ಪನ ಅಗ್ರಹಾರ ಕಾರಾಗೃಹ

ಬೆಂಗಳೂರು:  ಜೈಲಿಗೆ ನ್ಯಾಯಾಲಯಗಳಿಂದ ಜಾಮೀನು ಆದೇಶಗಳನ್ನು ತಡೆರಹಿತವಾಗಿ ವರ್ಗಾಯಿಸಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜೈಲಿನಲ್ಲಿ ಸಾಕಷ್ಟು ವೇಗದ ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್ ಜಾಮೀನು ಆದೇಶಗಳನ್ನು ಜಾರಿಗೊಳಿಸಿದರೂ ಸಂವಹನ ವಿಳಂಬದಿಂದಾಗಿ ಬಿಡುಗಡೆಯಾಗದ ಕೈದಿಗಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ಆದೇಶ ಮಾಡಿದೆ.

'ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು ಪ್ರತಿ ಜೈಲಿನಲ್ಲಿ ಅತ್ಯಂತ ವೇಗದ ಇಂಟರ್‌ನೆಟ್‌ ಸೌಲಭ್ಯದ ವ್ಯವಸ್ಥೆ ಮಾಡಬೇಕು. ಎಲ್ಲಿ ವೇಗದ ಇಂಟರ್‌ನೆಟ್‌ ಸೌಲಭ್ಯ ಇಲ್ಲವೋ ಅಲ್ಲಿ ತುರ್ತಾಗಿ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು' ಎಂದು ಆದೇಶದಲ್ಲಿ ಹೇಳಲಾಗಿದೆ.

'ಈ ನ್ಯಾಯಾಲಯದ ಜಾಮೀನು ಆದೇಶಗಳ ಹೊರತಾಗಿಯೂ ಸಂವಹನದ ವಿಳಂಬದಿಂದಾಗಿ ಬಿಡುಗಡೆಯಾಗದೇ ಜೈಲಿನಲ್ಲಿರುವ ಕೈದಿಗಳ ಬಗ್ಗೆ ನಮಗೆ ಕಾಳಜಿ ಇದೆ. ನ್ಯಾಯಾಲಯಗಳ ಆದೇಶವನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಳ್ಳಲು ಇದು ಸಕಾಲವಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠವು ಗುರುವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
 
ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸ್ವಯಂಪ್ರೇರಿತ ದೂರಿನ ವಿಚಾರಣೆಯನ್ನು ನಡೆಸಿತು. ಜೈಲಿನಲ್ಲಿ ಅಂತರ್ಜಾಲದ ಲಭ್ಯತೆಯ ಕುರಿತು 10 ರಾಜ್ಯಗಳು ಸಲ್ಲಿಸಿರುವ ವರದಿಯನ್ನು ನ್ಯಾಯಾಲಯವು ಗಮನಿಸಿತು. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳು ಅಂತರ್ಜಾಲ ಸೌಲಭ್ಯ ಇಲ್ಲದಿರುವ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿವೆ.
 
ಅಂತರ್ಜಾಲ ಲಭ್ಯವಿಲ್ಲದ ಜೈಲುಗಳಲ್ಲಿ ಸೌಲಭ್ಯ ಕಲ್ಪಿಸುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com