'ಕೆಲಸದ ಒತ್ತಡ': ಕಚೇರಿಯಲ್ಲೇ ಕೆನರಾ ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣು
'ಕೆಲಸದ ಒತ್ತಡ'ದಿಂದ ನೊಂದ ಮಹಿಳಾ ಬ್ಯಾಂಕ್ ಮ್ಯಾನೇಜರ್ ರೊಬ್ಬರು ಶುಕ್ರವಾರ ಬ್ಯಾಂಕ್ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಕುತ್ತುಪರಂಬದಲ್ಲಿ ನಡೆದಿದೆ.
Published: 09th April 2021 04:52 PM | Last Updated: 09th April 2021 05:04 PM | A+A A-

ಸ್ವಪ್ನಾ
ಕಣ್ಣೂರು: 'ಕೆಲಸದ ಒತ್ತಡ'ದಿಂದ ನೊಂದ ಮಹಿಳಾ ಬ್ಯಾಂಕ್ ಮ್ಯಾನೇಜರ್ ರೊಬ್ಬರು ಶುಕ್ರವಾರ ಬ್ಯಾಂಕ್ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಕುತ್ತುಪರಂಬದಲ್ಲಿ ನಡೆದಿದೆ.
ಕೆನರಾ ಬ್ಯಾಂಕಿನ ತೊಕ್ಕಿಲಂಗಡಿ ಶಾಖೆಯ ವ್ಯವಸ್ಥಾಪಕ ಕೆ ಸ್ವಪ್ನಾ(38) ಅವರು ಇಂದು ಬೆಳಗ್ಗೆ 9 ಗಂಟೆಗೆ ಬ್ಯಾಂಕ್ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಬಂದ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಅಲಾರಾಂ ಒತ್ತಿದ್ದಾರೆ. ತಕ್ಷಣ ಸ್ಥಳೀಯ ಜನರ ಸಹಾಯದಿಂದ ಬ್ಯಾಂಕ್ ಸಿಬ್ಬಂದಿ ಸ್ವಪ್ನಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮ್ಯಾನೇಜರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕುತ್ತುಪರಂಬ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಕುತ್ತುಪರಂಬಾ ಎಸಿಪಿ ಕೆ.ಜಿ.ಸುರೇಶ್ ಮತ್ತು ಎಸ್‌ಐ ಕೆ.ಟಿ.ಸಂದೀಪ್ ಅವರು ಸ್ಥಳಕ್ಕೆ ಭೇಟಿ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.
ಪೊಲೀಸರು ಸ್ವಪ್ನಾ ಅವರ ಡೈರಿಯನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಅವರು ಕೆಲಸದ ಒತ್ತಡ ತಡೆದುಕೊಳ್ಳಲು ಸಾಧ್ಯವಾಗದೆ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಪ್ನಾ ಅವರನ್ನು ಸೆಪ್ಟೆಂಬರ್ 2020ರಲ್ಲಿ ತೊಕ್ಕಿಲಂಗಡಿ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅವರು ಕಣ್ಣೂರಿನ ನಿರ್ಮಲಗಿರಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದೊಂದಿಗೆ ವಾಸಿಸುತ್ತಿದ್ದರು.