ದೆಹಲಿಯಲ್ಲಿ ಕೈಮೀರಿ ಹೋಗುತ್ತಿದೆ ಕೊರೋನಾ ಸೋಂಕು: ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆ; ಸಿಎಂ ಕೇಜ್ರಿವಾಲ್ ಆತಂಕ 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ನಿಯಂತ್ರಣ ಮೀರಿ ಹರಡುತ್ತಿದೆ. ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳು ಮತ್ತು ಆಕ್ಸಿಜನ್ ಪೂರೈಕೆ ಕೊರತೆ ತೀವ್ರವಾಗಿದೆ ಎಂದಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ನಿಯಂತ್ರಣ ಮೀರಿ ಹರಡುತ್ತಿದೆ. ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳು ಮತ್ತು ಆಕ್ಸಿಜನ್ ಪೂರೈಕೆ ಕೊರತೆ ತೀವ್ರವಾಗಿದೆ ಎಂದಿದ್ದಾರೆ.

ಮಿತಿಮೀರುತ್ತಿರುವ ಸೋಂಕಿತರಿಂದಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಜನರಿಗೆ ಚಿಕಿತ್ಸಾ ಸೌಲಭ್ಯ ನೀಡಲು ಕೇಂದ್ರ ಸರ್ಕಾರದ ನೆರವನ್ನು ಸಹ ಇದೇ ಸಂದರ್ಭದಲ್ಲಿ ಕೇಜ್ರಿವಾಲ್ ಕೇಳಿದ್ದಾರೆ. ಕೇವಲ ಒಂದೇ ದಿನದಲ್ಲಿ ದೆಹಲಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೇಕಡಾ 24ರಿಂದ ಶೇಕಡಾ 30ಕ್ಕೆ ಏರಿಕೆಯಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಮೀಸಲಿಡಿ ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಕಳೆದ 24 ಗಂಟೆಗಳಲ್ಲಿ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದ್ದೇನೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ.

ಆಸ್ಪತ್ರೆಗಳಲ್ಲಿ ಬೆಡ್ ಗಳು ಬಹಳ ಬೇಗನೆ ಭರ್ತಿಯಾಗುತ್ತಿವೆ. ಐಸಿಯು ಬೆಡ್ ಗಳಿಗೆ ಕೊರತೆಯಿದೆ, ಆಕ್ಸಿಜನ್ ಪೂರೈಕೆ ಕೂಡ ಕುಂಠಿತವಾಗುತ್ತಿದೆ. ಈ ಬಗ್ಗೆ ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದೇನೆ. ನಮಗೆ ಈಗ ಹೆಚ್ಚಿನ ಬೆಡ್ ಗಳು ಬೇಕಾಗಿದೆ, ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ 7 ಸಾವಿರ ಬೆಡ್ ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡುವಂತೆ ಕೇಳಿದ್ದೇನೆ ಎಂದು ದೆಹಲಿಯ ವಸ್ತುಸ್ಥಿತಿಯನ್ನು ಅರವಿಂದ್ ಕೇಜ್ರಿವಾಲ್ ವಿವರಿಸಿದ್ದಾರೆ.

ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯುಂಟಾಗುತ್ತಿದೆ, ದೆಹಲಿ ಸರ್ಕಾರ 6 ಸಾವಿರ ಅಧಿಕ ಆಕ್ಸಿಜನ್ ಪೂರೈಕೆಯ ಬೆಡ್ ಗಳನ್ನು ಒದಗಿಸುತ್ತಿದ್ದು ಐಸಿಯು ಬೆಡ್ ಗಳಿಗಿಂತ ವಿಭಿನ್ನವಾಗಿದೆ. ನಗರದಲ್ಲಿ ಮುಂದಿನ ದಿನಗಳಲ್ಲಿ ಇದು ಹೆಚ್ಚಿನ ಬೇಡಿಕೆಯಾಗಬಹುದು ಎಂದು ಹೇಳಿದ್ದಾರೆ. 

ಪರಿಸ್ಥಿತಿಗೆ ತಕ್ಕಂತೆ ಮುಂದಿನ ಎರಡು-ಮೂರು ದಿನಗಳಲ್ಲಿ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ರಾಧಾ ಸ್ವಾಮಿ ಸತ್ಸಂಗ ಆವರಣ ಮತ್ತು ಶಾಲೆಗಳಲ್ಲಿ 6 ಸಾವಿರ ಬೆಡ್ ಗಳನ್ನು ಸ್ಥಾಪಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ದೆಹಲಿಯಲ್ಲಿ ನಿನ್ನೆ ಒಂದೇ ದಿನ 24 ಸಾವಿರ ಹೊಸ ಕೊರೋನಾ ಕೇಸುಗಳು ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com